ನಗರಸಭೆಗೆ ಶಾಸಕ ದಿಢೀರ್ ಭೇಟಿ: ಕೆಲಸ ಮಾಡದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸ್ವರೂಪ್ ಪ್ರಕಾಶ್

30_HSN_05
Published on

ಹಾಸನ: ನಗರಸಭೆಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಗುರುವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಈ ವೇಳೆ ಹಾಜರಾತಿ ಪುಸ್ತಕ ನೋಡಿದಾಗ ಕೆಲ ಅಧಿಕಾರಿಗಳು ಬೆಳಗಿನದು, ಮಧ್ಯಾಹ್ನದ ಸಹಿಯನ್ನು ಮೊದಲೆ ಹಾಕಿದ್ದರು. ಇನ್ನು ಕೆಲವರು ನಾಳೆಯ ಸಹಿಯನ್ನು ಹಾಕಿ ಕಚೇರಿಯಲ್ಲಿಯೇ ಇಲ್ಲದಿರುವುದು ಕಂಡು ಬಂದಾಗ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ನಂತರ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡರ ಕೊಠಡಿಯಲ್ಲಿ ಶಾಸಕರು ನಗರಸಭೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಕರೆಯಿಸಿ ಸಭೆ ಮಾಡಿ ಇಲ್ಲಿನ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಲಿ ಎಂದು ಸೂಚನೆ ನೀಡಿದರು.

ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ಹಾಸನ ನಗರಸಭೆ ಪಾಲಿಕೆಗೆ ಸೇರಲ್ಪಟ್ಟಿದ್ದು, ಹಾಸನ ನಗರವು 25 ಮತ್ತು 12 ಹಳ್ಳಿ ಸೇರಿ ಒಟ್ಟು 37 ಹಳ್ಳಿಗಳು ಹಾಗೂ 7 ಪಂಚಾಯಿತಿ ನಗರಪಾಲಿಕೆಗೆ ಸೇರ್ಪಡೆ ಆಗಿವೆ. ಆ ಗ್ರಾಮಗಳಿಗೆ ಇ-ಖಾತೆ ಸಮಸ್ಯೆಗಳಿದ್ದು, ಈ ಹಿನ್ನಲೆಯಲ್ಲಿ ನಗರಸಭೆಗೆ ಅನಿರಿಕ್ಷಿತವಾಗಿ ಭೇಟಿ ನೀಡಿದ್ದು, ಸಂಬಂಧಪಟ್ಟ ಕಂದಾಯ ಅಧಿಕಾರಿಗಳು, ಬಿಲ್ ಕಲೆಕ್ಟರ್ ಸೇರಿದಂತೆ ಎಲ್ಲರನ್ನೂ ಸಭೆಗೆ ಕರೆದು ವಿಚಾರಣೆ ಮಾಡಿ ಅವರಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಯಾರೆ ಬಂದರೂ ಕೂಡ ಆದಷ್ಟು ಶೀಘ್ರ ಕೆಲಸವನ್ನು ಮಾಡಿಕೊಡಬೇಕೆಂದು ಆದೇಶವನ್ನು ಕೊಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಕ್ಕೂ ಸಹ ಅಲ್ಲಿನ ಇಂಜಿನಿಯರ್ ಜತೆ ಚರ್ಚೆ ಮಾಡಲಾಗಿದೆ. 35 ನಗರಸಭಾ ಸದಸ್ಯರು ಎಲ್ಲ ಪಕ್ಷದವರು ಸೇರಿ ಪಟ್ಟಿಯನ್ನು ಕೊಡಲಾಗಿದ್ದು, ಆಯಾ ವಾರ್ಡಿನಲ್ಲಿ ಕೆಲಸ ಯಾವುದು ಆಗಬೇಕಾಗಿದೆ ಎಲ್ಲವನ್ನೂ ಕೂಡ ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಿ ಎಂದು ಚರ್ಚಿಸಲಾಗಿದೆ ಎಂದರು.

ನಾನು ನಗರಸಭೆ ಬಂದಾಗ ಇಲ್ಲಿನ ಕೆಲ ಅಧಿಕಾರಿಗಳು ತಡವಾಗಿ ಬಂದಿರುವುದು ಬೆಳಕಿಗೆ ಬಂದಿದೆ. ಇನ್ನು ಮುಂದೆ ಈ ರೀತಿ ಆಗಬಾರದು. ಸಾರ್ವಜನಿಕರ ಕೆಲಸ ಮಾಡಲು ಸರಿಯಾದ ಸಮಯಕ್ಕೆ ಬರಬೇಕೆಂದು ಸೂಚನೆ ಕೊಡಲಾಗಿದೆ. ಕೆಲವರು ನೀರು, ಕಂದಾಯ ಸಂಗ್ರಹಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಏನೇ ಕೆಲಸಗಳಿದ್ದರೂ ಕಂದಾಯ ಸಂಗ್ರಹ ಮುಗಿಸಿ 11.30ರ ಒಳಗೆ ನಗರಸಭೆ ಕಚೇರಿಯಲ್ಲಿ ಇರಬೇಕೆಂದು ಈಗಾಗಲೆ ಆದೇಶ ಕೊಡಲಾಗಿದೆ. ನಗರಸಭೆಗೆ ಬಹಳಷ್ಟು ಕೆಲಸಗಳು ಆಗಬೇಕಾಗಿದೆ. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲಾ ಸೇರಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net