ಮಂಡ್ಯ: ತಾಲೂಕಿನ ಬಿ.ಹೊಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 19 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಗೋದಾಮು ಕಟ್ಟಡದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ರವಿಕುಮಾರ್ ಗಣಿಗ ಕಿವಿಮಾತು ಹೇಳಿದರು.
ಪಿಎಸಿಎಸ್‌ಎಂಎಸ್‌ಸಿ ಯೋಜನೆಯಡಿ ಗ್ರಾಮದಲ್ಲಿ ನಿರ್ಮಿಸಿರುವ ಗೋದಾಮು ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಹಾಗೂ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ 12 ಕೋಟಿ ರೂ ವೆಚ್ಚದಲ್ಲಿ ಎಂಡಿಸಿಸಿ ಬ್ಯಾಂಕ್ ನೂತನ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಎಂಡಿಸಿಸಿ ಬ್ಯಾಂಕ್‌ಗೆ 75 ವರ್ಷದ ಇತಿಹಾಸವಿದ್ದು, ಇನ್ನು ಎರಡು ವರ್ಷದಲ್ಲೇ ಕಟ್ಟಡ ನಿರ್ಮಿಸಿ ಉದ್ಘಾಟನೆ ಮಾಡುವ ಗುರಿ ಹೊಂದಲಾಗಿದೆ. ಅಂತೆಯೇ ರೈತರಿಗೆ ಹೆಚ್ಚು ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
ಎಂಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ವನಜಾಕ್ಷಿ ಮಾತನಾಡಿ, ರಾಜ್ಯಸರ್ಕಾರದಿಂದ ಶೂನ್ಯ ಬಡ್ಡಿ ದರದಲ್ಲಿ 5 ಕೋಟಿ ರೂ ಕೃಷಿ ಸಾಲ ನೀಡಲಾಗಿದೆ. ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಬಿ.ಹೊಸೂರು ಸೊಸೈಟಿ ಅಧ್ಯಕ್ಷ ಎಚ್.ಎನ್.ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಅಶೋಕ್, ಎಚ್.ಸಿ.ಕಾಳೇಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬೋರೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ಪ್ರತಾಪ್ ಇತರರಿದ್ದರು.