

ಮೈಸೂರು: ರಾಜ್ಯ ಸಾರಿಗೆ ಇಲಾಖೆ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಆದೇಶ ಹೊರಡಿಸಿದೆ. ಬಹುತೇಕ ವಾಹನ ಸವಾರರು ಈ ಆದೇಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಬಾಕಿ ಇರಿಸಿಕೊಂಡಿದ್ದ ದಂಡವನ್ನು ಕಟ್ಟುತ್ತಿದ್ದಾರೆ. ಇದೀಗ ಮೈಸೂರಿನ ಚಾಮರಾಜ ವಿಧಾಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ 50% ರಿಯಾಯಿತಿಯಲ್ಲಿ ದಂಡ ಕಟ್ಟಿದ್ದಾರೆ.
ವೇಗದ ಕಾರು ಚಾಲನೆಗೆ ಶಾಸಕ ಎಲ್.ನಾಗೇಂದ್ರ 7 ಸಾವಿರ ರೂ. ದಂಡ ಕಟ್ಟಬೇಕಾಗುತ್ತು. ಇದೀಗ 50% ರಿಯಾಯಿತಿಯೊಂದಿಗೆ ಮೈಸೂರಿನ ಮೆಟ್ರೋಪೋಲ್ ವೃತ್ತದಲ್ಲಿ ದಂಡ ಪಾವತಿಸಿದ್ದಾರೆ.
ಇದಲ್ಲದೆ ನಿನ್ನೆ (ಫೆ.3) ಬೆಂಗಳೂರಿನ ಕೆಂಗೇರಿ ಸಂಚಾರ ಠಾಣೆಯ ಎಎಸ್ಐ ನಾರಾಯಣಪ್ಪ ಹಾಗೂ ಕಾನ್ಸ್ಟೇಬಲ್ ಪಿ.ಸಿ. ಸರ್ದಾಮ್ ಉತ್ತರ ಹಳ್ಳಿ ನಿವಾಸಿ ರಕ್ಷಿತ್ ಎಂಬುವವರಿಂದ 25,500 ರೂ. ಸಂಚಾರ ಉಲ್ಲಂಘನೆಯ ದಂಡ ಕಟ್ಟಿಸಿಕೊಂಡಿದ್ದಾರೆ.
ರಕ್ಷಿತ್ ಎಂಬಾತ ಹಲವು ಬಾರಿ ಟ್ರಾಫಿಕ್ ಉಲ್ಲಂಘನೆ ಮಾಡಿದ್ದರೂ, ದಂಡ ಮಾತ್ರ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು. ಹೀಗಾಗಿ ಒಟ್ಟು ದಂಡದ ಮೊತ್ತ ಬರೋಬ್ಬರಿ 51,000 ರೂ. ಆಗಿತ್ತು. ಇದೀಗ ರಕ್ಷಿತ್ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಶೇ.50 ರಷ್ಟು ರಿಯಾಯಿತಿಯೊಂದಿಗೆ 25,500 ರೂ. ಪಾವತಿಸಿದ್ದಾನೆ.
ವಿನಾಯಿತಿ ನೀಡಿದ್ದೇಕೆ?
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಎಲ್ಲರಿಗೂ ನ್ಯಾಯ ಒದಗಿಸುವ ಸಲುವಾಗಿ ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.