

ಮಂಗಳೂರು : ಕಾರ್ಮಿಕರ ಆರೋಗ್ಯ ವಿಮೆ (ಇಎಸ್‌ಐ)ಯಡಿ ಚಿಕಿತ್ಸೆ ಪಡೆಯುವ ವಿಮೆದಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷೃದಿಂದಾಗಿ ವೈದ್ಯಕೀಯ ಸೌಲಭ್ಯ ಪಡೆಯಲು ತೀವ್ರ ತೊಂದರೆಯಾಗುತ್ತಿದೆ ಎಂದು
ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಎಎಸ್‌ಐ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಅವಧಿಯು ಸೆ.30ರಂದು ಅಂತ್ಯಗೊಂಡಿದೆ.ಹಾಗಾಗಿ ಅ.1 ರಿಂದ ರೋಗಿಗಳಿಗೆ ತುರ್ತು ಸಂದರ್ಭ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ. ಇಎಎಸ್‌ಐ ಸೌಲಭ್ಯ ಹೊಂದಿದ್ದರೂ ಯಾಕೆ ಕೊಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದು, ರಾಜ್ಯ ಸರ್ಕಾರದ ತಪ್ಪಿಗೆ ಅಧಿಕಾರಿಗಳು ಪರಿತಪಿಸುವಂತಾಗಿದೆ. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನಿಗದಿತ ಮೊತ್ತವನ್ನು ಪಾವತಿಸಿ ಸೂಕ್ತ ಕ್ರಮ ಕೈಗೊಂಡಿದ್ದರೆ ರೋಗಿಗಳು ಇಂದು ಪರದಾಡುವ ಸ್ಥಿತಿ ಬರುತ್ತಿರಲಿಲ್ಲ. ಇದೇ ವೇಳೆ ಕೇಂದ್ರ ಸರ್ಕಾರದಿಂದ ನೀಡಲ್ಪಡುವ ವೈದ್ಯಕೀಯ ಚಿಕಿತ್ಸೆ ಸೌಲಭ್ಯಗಳು ಮುಂದುವರಿದಿದ್ದು, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಚಿಕಿತ್ಸೆಗಳು ಮಾತ್ರ ಸಿಗದೇ ರೋಗಿಗಳಿಗೆ ತೊಂದರೆಯಾಗಿದೆ. ಇಎಎಸ್‌ಐ ಕಾರ್ಮಿಕರ ಹಕ್ಕು ಎನ್ನುವುದನ್ನು ಮನಗಂಡು ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.