ಜನತೆಗೆ ಸಮಸ್ಯೆ ತಂದೊಡ್ಡಿದ ಅವೈಜ್ಞಾನಿಕ ಸಮೀಕ್ಷೆ : ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

allwyn_130820_kamath
Published on


ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಅವೈಜ್ಞಾನಿಕ ಜಾತಿ ಸಮೀಕ್ಷೆಯಿಂದಾಗಿ ಮಂಗಳೂರಿನ ಜನತೆ ತೀವ್ರ ಸಮಸ್ಯೆ ಅನುಭವಿಸುತ್ತಿದ್ದು ಅಗತ್ಯ ಕೆಲಸಗಳಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ, ತಾಲೂಕು ಕಚೇರಿ ಸೇರಿದಂತೆ ಎಲ್ಲ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್, ಗ್ರಾಮ ಲೆಕ್ಕಾಧಿಕಾರಿ ಸಹಿತ ಬಹುತೇಕ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರನ್ನು ಅವೈಜ್ಞಾನಿಕ ಸಮೀಕ್ಷೆಗೆ ಬಳಸಿಕೊಂಡಿರುವುದು ವ್ಯವಸ್ಥೆ ಹದಗೆಡಲು ಕಾರಣವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಎಷ್ಟೇ ಅಗತ್ಯ ಕಾರ್ಯಗಳಿದ್ದರೂ ಹತ್ತು ದಿನ ಬಿಟ್ಟು ಬನ್ನಿ ಎಂದು ಜನರನ್ನು ವಾಪಸ್ ಕಳಿಸಲಾಗುತ್ತಿದೆ. ಇದರಿಂದ ನಿಗದಿತ ಅವಧಿಯೊಳಗೆ ವಿವಿಧ ಕಚೇರಿಗಳಿಗೆ ಅಗತ್ಯವಾಗಿ ಸಲ್ಲಿಸಬೇಕಾಗಿರುವ ಪ್ರಮುಖ ದಾಖಲೆ ಪತ್ರಗಳ ವಿಳಂಬವಾಗುತ್ತಿದ್ದು ಜನರ ಸಮಸ್ಯೆಗಳಿಗೆ ಸರ್ಕಾರವೇ ನೇರ ಕಾರಣವಾಗುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ.
ಇತ್ತೀಚೆಗೆ ಹೆರಿಗೆಯಾಗಿದ್ದರೂ, ಆರೋಗ್ಯ ಸಮಸ್ಯೆಯಿದ್ದರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳ ಬೇಕೆಂದು ಒತ್ತಾಯ ಮಾಡುತ್ತಿರುವುದು ಮನುಷ್ಯತ್ವವಿರದ ರಾಜ್ಯ ಸರ್ಕಾರದ ಲಕ್ಷಣವಾಗಿದೆ. ಅತ್ತ ಸಮೀಕ್ಷೆಯೂ ಗೊಂದಲಮಯ, ಇತ್ತ ಜನಸಾಮಾನ್ಯರಿಗೂ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net