

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ನಿಂದ ಅಡ್ಡಹೊಳೆವರೆಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುವ ಬಗ್ಗೆ ಸಾರ್ವಜನಿಕ ದೂರುಗಳು ಬಂದ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಂಗಳವಾರ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೆರಿಯಶಾಂತಿ, ಅಡ್ಡಹೊಳೆ ಎಂಬಲ್ಲಿಗೆ ಭೇಟಿ ನೀಡಿ ಕಾಮಗಾರಿ ಅವಲೋಕಿಸಿದರು.
ಪೆರಿಯಶಾಂತಿಯ ಇಚ್ಲಂಪಾಡಿ ಕ್ರಾಸ್ ಬಳಿಗೆ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ಕಾಮಗಾರಿ ನಿರ್ವಹಿಸುತ್ತಿರುವ, ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳನ್ನು ಸ್ಥಳಕ್ಕೆ ಕರೆಸಿದ ಶಾಸಕಿ ಅವರಿಂದ ಮಾಹಿತಿ ಪಡೆದು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿ ಕಾಮಗಾರಿಗೆ ವೇಗ ನೀಡಲು ನಿರ್ದೇಶಿಸಿದರು. ಪೆರಿಯಶಾಂತಿಯಲ್ಲಿ ಕಾಮಗಾರಿ ಪರೀಕ್ಷಿಸಿದ ಬಳಿಕ ಶಾಸಕರು ಅಡ್ಡಹೊಳೆ ಭಾಗದಲ್ಲಿ ಕಾಮಗಾರಿ ವೀಕ್ಷಣೆ ನಡೆಸಿದರು.
ಇಂಜಿನಿಯರ್ಗಳಾದ ನವೀನ್, ಶ್ರೀನಿವಾಸ್, ಜಗನ್ಮೋಹನ್, ವಿನೋದ್, ವಿವೇಕಾನಂದ ಮೊದಲಾದವರು ಕಾಮಗಾರಿ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಪುತ್ತೂರು ತಾಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಕಡಬ, ಪ್ರಮುಖರಾದ ಭಾಸ್ಕರ ಗೌಡ ಇಚ್ಲಂಪಾಡಿ, ಬಾಲಕೃಷ್ಣ ಬಾಣಜಾಲು, ರವಿಪ್ರಸಾದ್ ಶೆಟ್ಟಿ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.