

ಪಡುಬಿದ್ರಿ: ಸಂಸದ, ಶಾಸಕ, ಸಚಿವನಾಗಿ ಹಲವು ಯೋಜನೆ ತಂದು ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಮಾಜಿ ಸಚಿವರು ಸರ್ಕಾರದ ಸಚಿವರಿಗೆ ಒತ್ತಡ ಹೇರಿ ತಡೆಯೊಡ್ಡುತ್ತಿದ್ದಾರೆಂಬ ಶಾಸಕ ಗುರ್ಮೆ ಆರೋಪ ನಿರಾಧಾರ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ನನ್ನ ಮೇಲಿನ ಆರೋಪಕ್ಕೆ ಪೂರಕ ದಾಖಲೆ ಇದ್ದರೆ ಕೊಡಲಿ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ತನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳನ್ನು ಬಿಜೆಪಿ ಹಿಂದಿನ ಶಾಸಕರು ಕಾರ್ಯಗತ ಮಾಡದೆ ಅನುದಾನ ಬೇರೆಡೆ ವರ್ಗಾಯಿಸಿದ್ದಾರೆ. ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಸಾಲದು ಅದರ ಹಿಂದೆ ಹೋಗಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದ ಪ್ರಮುಖರಾದ ನವೀನಚಂದ್ರ ಸುವರ್ಣ, ಜೀತೆಂದ್ರ, ಶಾಂತಲತಾ ಶೆಟ್ಟಿ, ಶರ್ಪುದ್ದೀನ್ ಶೇಖ್ ಉಪಸ್ಥಿತರಿದ್ದರು.