

ಮಂಡ್ಯ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದು, ಸಂಗ್ರಹಿಸಿಟ್ಟುಕೊಳ್ಳುವ ಪ್ರಕರಣ ಸಾಕಷ್ಟು ಬೆಳಕಿಗೆ ಬಂದಿದೆ. ಆದರೆ ಭಾರತೀಯ ಆಹಾರ ನಿಗಮ(ಎಫ್‌ಸಿಎ) ಗೋಡೌನ್‌ನಿಂದ ಹೊರಡುವ ಲೋಡು ಟಿಎಪಿಸಿಎಂಎಸ್ ಸೇರಿಗೆ ಮುನ್ನವೇ ಅಕ್ಕಿಯನ್ನು ಕದ್ದು ವಂಚನೆ ಮಾಡುತ್ತಿರುವುದನ್ನು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬಯಲಿಗೆಳೆದಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅಕ್ಕಿ ಹಾಗೂ ಭೂಮಿ ದಾಖಲೆ ತಿದ್ದುಪಡಿ ವಿಚಾರವನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಫ್‌ಸಿಎಯಿಂದ ಹೊರಡುವಾಗ ಇರುವ ತೂಕ ಹಾಗೂ ಟಿಎಪಿಸಿಎಂಎಸ್‌ಗೆ ಬಂದಾಗ ಇರುವ ತೂಕದ ಬಗ್ಗೆ ನರೇಂದ್ರಸ್ವಾಮಿ ಅವರ ಪ್ರಶ್ನೆಗೆ ಆಹಾರ ಇಲಾಖೆ ಜೆಡಿ ಕೃಷ್ಣಕುಮಾರ್, ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಶ್ರೀಧರ್ ಸಮರ್ಪಕ ಉತ್ತರವನ್ನೇ ನೀಡಲಿಲ್ಲ. ಮಾತ್ರವಲ್ಲದೆ ಪ್ರತಿ ಲೋಡ್‌ನಲ್ಲಿ 60 ರಿಂದ 100 ಕೆಜಿವರೆಗೆ ವ್ಯತ್ಯಾಸವಿದೆ ಎನ್ನುವುದನ್ನು ಅಧಿಕಾರಿಗಳೇ ಬಹಿರಂಗಪಡಿಸಿದರು. ಹಾಗಾದರೆ ಕ್ರಮವೆಂದು ಕೇಳಿದರೆ, ಅಧಿಕಾರಿಗಳು ಗಪ್‌ಚುಪ್ ಆದರು.
ಇದರಿಂದ ಆಕ್ರೋಶಗೊಂಡ ಪಿಎಂಎನ್, ಇದರಲ್ಲಿ ಎಲ್ಲ ಅಧಿಕಾರಿಗಳಿಗೂ ಪಾಲು ಇದೆ. ಇದೊಂದು ರೀತಿ ಅಘೋಷಿತ ಸತ್ಯ. ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಹಾಳಾಗುತ್ತಿದೆ. ಕಡಿಮೆ ಬಂದಾಗ ಅದನ್ನು ಸರಿದೂಗಿಸಲು ಜನರಿಗೆ ಕಡಿಮೆ ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸೂಚಿಸಿದರು.