ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ರಸಗೊಬ್ಬರದ ಅಭಾವವಿಲ್ಲ

hnl tp m,eeting july 28
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
Published on

ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ಯೂರಿಯಾ ರಸಗೊಬ್ಬರದ ಅಭಾವ ಉಂಟಾಗುವುದಿಲ್ಲ. ಈ ಬಗ್ಗೆ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು..

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರೖೆಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮುಂಗಾರು ಹಂಗಾಮಿನಲ್ಲಿ 35,800 ಹೆಕ್ಟೇರ್ ಕೃಷಿ ಭೂಮಿಯಲ್ಲಿ 29,500 ಹೆಕ್ಟೇರ್ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಇದರಲ್ಲಿ ಬಹುಪಾಲು ಮೆಕ್ಕೆಜೋಳವನ್ನು ಬಿತ್ತನೆ ಮಾಡಲಾಗಿದೆ. ರೈತರು ಬೆಳೆಗಳಿಗೆ ಶೀತ ಬಾಧೆ ಕಾಡುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೆಚ್ಚು ಯೂರಿಯಾ ಬಳಕೆಗೆ ಮುಂದಾಗಿರುವ ಕಾರಣ ಯೂರಿಯಾ ರಸ ಗೊಬ್ಬರದ ಕೊರತೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂದರು.

ಆದರೆ ಅವಳಿ ತಾಲೂಕಿನಲ್ಲಿ 7400 ಮೆಟ್ರಿಕ್ ಟನ್ ಬೇಡಿಕೆಯಿದ್ದು, ಅದರಲ್ಲಿ 5600 ಮೆಟ್ರಿಕ್ ಟನ್ ಬಳಕೆಯಾಗಿದೆ. ಬಾಕಿ ಉಳಿದ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ಇದರಿಂದ ಗೊಬ್ಬರ ಕೊರತೆಯ ಪ್ರಶ್ನೆಯೇ ಇಲ್ಲ ಎಂದು ವಿವರಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾಉಲ್ಲಾ ಮಾತನಾಡಿ, ಯೂರಿಯಾ ರಸಗೊಬ್ಬರವನ್ನು ಅತಿಯಾಗಿ ಬಳಕೆ ಮಾಡಿದರೆ ಬೆಳೆಗಳು ಮೃದುವಾಗಿ ಭವಿಷ್ಯದಲ್ಲಿ ಕೀಟಬಾಧೆ ಉಂಟಾಗುತ್ತದೆ. ಆದ್ದರಿಂದ ಯೂರಿಯಾ ಗೊಬ್ಬರವನ್ನು ಮಿತ ಪ್ರಮಾಣದಲ್ಲಿ ಬಳಸಬೇಕು ಎಂದು ಮಾಹಿತಿ ನೀಡಿದರು.

ನ್ಯಾನೋ ಯೂರಿಯಾ ಗೊಬ್ಬರ ಬೆಳೆಗಳಿಗೆ ಸಹಕಾರಿಯಾಗಿದೆ. ಈ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇರುವ ಕಾರಣ ತಾಲೂಕಿನಾದ್ಯಂತ ನ್ಯಾನೋ ಗೊಬ್ಬರದ ಬಳಕೆ ಪ್ರಾತ್ಯಕ್ಷತೆ ಹಮ್ಮಿಕೊಂಡು ತಿಳಿವಳಿಕೆ ನೀಡಲಾಗುವುದು ಎಂದು ಹೇಳಿದರು.

ಉಪಕೃಷಿ ನಿರ್ದೇಶಕ ರೇವಣ್ಣಸಿದ್ದನಗೌಡ ಮಾತನಾಡಿ, ಸಾವಯವ ಕೃಷಿ ಪದ್ಧತಿ ಅಳವಡಿಕೊಳ್ಳಲು ಈಗ ಸಕಾಲವಾಗಿದ್ದು, ರೈತರು ಸಾವಯವ ಕೃಷಿ ಬಗ್ಗೆ ಅಧಿಕಾರಿಗಳೊಂದಿಗೆ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.

ಬಿಇಒ ನಿಂಗಪ್ಪ ಮಾಹಿತಿ ನೀಡಿ, ವಿದ್ಯಾರ್ಥಿಗಳ ಕೊರತೆಯಿಂದಾಗಿ ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಜತೆಗೆ ಕಡಿಮೆ ದಾಖಲಾತಿ ಹೊಂದಿರುವ ಶಾಲೆ ಮಕ್ಕಳನ್ನು ಪಕ್ಕದ ಸರ್ಕಾರಿ ಶಾಲೆಗೆ ದಾಖಲಿಸಲಾಗಿದೆ ಎಂದರು.

ಶಾಲೆಗಳಿಗೆ ಕಳಪೆ ಬೇಳೆಗಳನ್ನು ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಗುತ್ತಿಗೆದಾರನನ್ನು ಸಂರ್ಪಸಿ ಗುಣಮಟ್ಟದ ಬೇಳೆ ನೀಡುವಂತೆ ತಿಳಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ಅಡಕೆ ಮತ್ತು ಎಲೆಬಳ್ಳಿಗೆ ವಿಮಾ ಸೌಲಭ್ಯವಿದ್ದು, ಹೊನ್ನಾಳಿ ತಾಲೂಕಿನಲ್ಲಿ 2025 ಹಾಗೂ ನ್ಯಾಮತಿಯಲ್ಲಿ 4825 ಜನರು ವಿಮೆ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಡಿಪಿಒ ಜ್ಯೋತಿ ಮಾತನಾಡಿದರು. ಸಭೆಯಲ್ಲಿ ಅರಣ್ಯ, ಬೆಸ್ಕಾಂ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಸೇರಿ ಎಲ್ಲ ಇಲಾಖೆಯವರು ಸಮಗ್ರ ಮಾಹಿತಿ ನೀಡಿದರು.

ಹೊನ್ನಾಳಿ ತಹಸೀಲ್ದಾರ್ ರಾಜೇಶ್​ಕುಮಾರ್, ನ್ಯಾಮತಿ ತಹಸೀಲ್ದಾರ್ ಕವಿರಾಜ್, ತಾಪಂ ಇಒಗಳಾದ ಪ್ರಕಾಶ್, ರಾಘವೇಂದ್ರ, ಸಿಪಿಐಗಳಾದ ಸುನಿಲ್​ಕುಮಾರ್, ರವಿಕುಮಾರ್, ಅರಣ್ಯ ಇಲಾಖೆಯ ಕಿಶೋರ್​ನಾಯ್್ಕ ಮೃತ್ಯುಂಜಯ, ಉಮಾ, ಲೀಲಾವತಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಗೈರಾದ ಅಧಿಕಾರಿಗಳಿಗೆ ನೋಟಿಸ್: ಪ್ರತಿ ಬಾರಿಯೂ ಕೆಲ ಮುಖ್ಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ಕೆಡಿಪಿ ಸಭೆಗೆ ಗೈರಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಕೂಡಲೇ ಗೈರಾದವರಿಗೆ ತುರ್ತು ನೋಟಿಸ್ ಜಾರಿ ಮಾಡಿ, ಗೈರಾದ ಬಗ್ಗೆ ಕಾರಣ ಕೇಳಿ. ಅದಕ್ಕೂ ಉತ್ತರ ನೀಡದಿದ್ದರೆ ಅವರನ್ನು ಅಮಾನತಿನಲ್ಲಿಡಲು ಮೇಲಧಿಕಾರಿಗಳಿಗೆ ಪತ್ರ ಬರೆಯೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net