More

    ನೂತನ ಶಾಸಕರಿಗೆ ಹತ್ತಾರು ಸವಾಲು

    ಎಂಎಸ್‌ಜಿಪಿ ಘಟಕಕ್ಕೆ ಬೀಳುವುದೇ ಬೀಗ

    ಶಾಸಕರ ನವ ದೊಡ್ಡಳ್ಳಾಪುರ ಕನಸು ಈಡೇರಲಿದೆಯೇ?

    • ಎಸ್.ವೆಂಕಟರಾಜು ದೊಡ್ಡಬಳ್ಳಾಪುರ
      ಹೊಸ ಹುಮ್ಮಸ್ಸಿನಲ್ಲಿರುವ ಬಿಜೆಪಿ ವಿಜೇತ ಅಭ್ಯರ್ಥಿ ಧೀರಜ್ ಮುನಿರಾಜು ಅವರಿಗೆ ತಾಲೂಕಿನಲ್ಲಿ ಬಹುಮುಖಿ ಸಮಸ್ಯೆಗಳು ಮತ್ತು ಜನರ ಹತ್ತು ಹಲವು ಬೇಡಿಕೆಗಳು ಸವಾಲಾಗಿವೆ.
      ದೊಡ್ಡಬಳ್ಳಾಪುರ ಕ್ಷೇತ್ರವು ಬೆಂಗಳೂರಿನ ಪಕ್ಕದ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ದಶಕಗಳಿಂದಲೂ ತೀರಾ ಹಿಂದುಳಿದ ಪ್ರದೇಶವೇ ಆಗಿದೆ. ಅದರಲ್ಲೂ ತಾಲೂಕಿನ ಅನೇಕ ಕುಗ್ರಾಮಗಳು ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಮುಖ್ಯವಾಗಿ ರಸ್ತೆ, ಮನೆ, ಜಮೀನು ಹಕ್ಕುಪತ್ರ, ನೀರಿನ ಸಮಸ್ಯೆ, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ, ಅನೇಕ ಗ್ರಾಮಗಳಲ್ಲಿ ತಾಂಡವವಾಡುತ್ತಿರುವ ಅಕ್ರಮ ಮದ್ಯ ಮಾರಾಟ, ಎಂಎಸ್‌ಜಿಪಿ ಘಟಕಕ್ಕೆ ಬೀಗ ಸೇರಿ ಹಲವು ವಿಚಾರಗಳಲ್ಲಿ ಆಡಳಿತ ವಿರೋಧಿ ಭಾವನೆ ಮೂಡಿದ್ದರಿಂದಲೇ ಧೀರಜ್ ಮುನಿರಾಜು ಗೆಲುವು ಸಾಧಿಸಲು ಸಾಧ್ಯವಾಗಿದೆ. ನವ ದೊಡ್ಡಬಳ್ಳಾಪುರ ನಿರ್ಮಾಣ ಭರವಸೆ ನೀಡಿದಂತೆ ಅವರ ಬೇಡಿಕೆ ಈಡೇರಿಸುವ ಬಾಧ್ಯತೆ ಅವರ ಹೆಗಲ ಮೇಲಿದೆ.

    ಎಂಎಸ್ಜಿಪಿ ಘಟಕ್ಕೆ ಬೀಗ: ತಾಲೂಕಿಗೆ ವಿಷಕಂಟಕವಾಗಿ ಪರಿಣಮಿಸಿರುವ ಬಿಬಿಎಂಪಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದರ ಪರಿಣಾಮವಾಗಿ ಸಾಸಲು ಹೋಬಳಿ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಹತ್ತಾರು ಗ್ರಾಮದಲ್ಲಿನ ನೀರು ಕಲುಷಿತಗೊಂಡಿದೆ. ಜಾನುವಾರುಗಳು ಕೆರೆ ಕುಂಟೆಗಳ ನೀರನ್ನು ಕುಡಿದು ಸಾವನ್ನಪ್ಪಿರುವ ನೂರಾರು ನಿದರ್ಶನಗಳಿವೆ. ಇಲ್ಲಿನ ಸುತ್ತಮುತ್ತಲ ಗ್ರಾಮಗಳ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಎಂಎಸ್‌ಜಿಪಿ ತ್ಯಾಜ್ಯ ಸಾಗಣೆ ಮಾಡುವ ಬಿಬಿಎಂಪಿಯ ಕಸದ ಲಾರಿಗಳಿಗೆ ಹಲವು ಬೈಕ್ ಸವಾರರು ಬಲಿಯಾಗಿದ್ದಾರೆ. ಕಸದ ಘಟಕಕ್ಕೆ ಬೀಗ ಜಡಿಯುವಂತೆ ಸಾಕಷ್ಟು ಹೋರಾಟಗಳು ಕೂಡ ನಡೆದಿದೆ. ತಾರ್ಕಿಕ ಅಂತ್ಯಕ್ಕೆ ಬರಲಾಗಿಲ್ಲ. ಶೀಘ್ರ ಎಂಎಸ್‌ಜಿಪಿ ಘನ ತ್ಯಾಜ್ಯ ಘಟಕಕ್ಕೆ ಬೀಗ ಹಾಕಿಸಿ ಸುತ್ತಲಿನ ಪರಿಸರ, ಜನ ಜಾನುವಾರುಗಳನ್ನು ಉಳಿಸಬೇಕಿದೆ.

    ದೊಡ್ಡಬಳ್ಳಾಪುರಕ್ಕೆ ಜಿಲ್ಲಾಕೇಂದ್ರ ಪಟ್ಟ ಅವಿಭಜಿತ ಕೋಲಾರ ಜಿಲ್ಲೆಯನ್ನು ವಿಭಾಗಿಸಿದ ಬಳಿಕ ಬೆಂ.ಗ್ರಾಮಾಂತರ ಜಿಲ್ಲೆಯಾಗಿ ಘೋಷಣೆಯಾಗಿ ದಶಕಗಳೆ ಕಳೆದರೂ ಜಿಲ್ಲಾ ಕೇಂದ್ರ ಘೋಷಣೆಯಾಗಿಲ್ಲ. ದೊಡ್ಡಬಳ್ಳಾಪುರ ತಾಲೂಕು ಜನಸಂಖ್ಯೆ, ವಿಸ್ತೀರ್ಣ, ಉಪವಿಭಾಗಧಿಕಾರಿ ಕಚೇರಿ, ಆದಾಯ ಹೀಗೆ ಸರ್ಕಾರಿ ಮಾನದಂಡಗಳಡಿ ಪ್ರತಿಯೊಂದು ಅರ್ಹತೆಗಳಿದ್ದರೂ ರಾಜಕೀಯ ಮೇಲಾಟಕ್ಕೆ ಈವರೆಗೆ ಜಿಲ್ಲಾಕೇಂದ್ರ ಘೋಷಣೆಯಾಗದೆ ಉಳಿದಿದೆ. ನೂತನ ಶಾಸಕರು ಜಿಲಾ ್ಲಕೇಂದ್ರಕ್ಕೆ ಶ್ರಮಿಸುವ ವಿಶ್ವಾಸದಲ್ಲಿ ಜನತೆ ಇದ್ದಾರೆ.

    ರಸ್ತೆ ಅಗಲೀಕರಣ ದೊಡ್ಡಬಳ್ಳಾಪುರದ ಪ್ರಮುಖ ರಸ್ತೆಗಳು, ವೃತ್ತಗಳು ಹಳೇ ಬಸ್ ನಿಲ್ದಾಣಗಳು ಕಿಷ್ಕಿಂಧೆಯಾಗಿವೆ. ಎದುರು-ಬದರು ಎರಡು ವಾಹನಗಳು ಬಂದರೆ ಸಂಚರಿಸುವುದು ಕಷ್ಟವಾಗಿದೆ. ತಾಲೂಕು ಕಚೇರಿ ರಸ್ತೆ, ಚೌಕದ ರಸ್ತೆ, ಮಾರುಕಟ್ಟೆ ರಸ್ತೆ, ಕೊಂಗಾಡಿಯಪ್ಪ ರಸ್ತೆ ಹಲವು ಪ್ರಮುಖ ರಸ್ತೆಗಳ ಅಗಲೀಕರಣ ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಶೀಘ್ರ ಅಗಲೀಕರಣ ಮಾಡಬೇಕಿದೆ.

    ಶಿಕ್ಷಣ ಸಂಸ್ಥೆಗಳು ಸಿಲಿಕಾನ್ ಸಿಟಿಗೆ ಕೂಗಳತೆ ದೂರದಲ್ಲಿದ್ದರೂ ತಾಲೂಕಿನಲ್ಲಿ ಸುಸಜ್ಜಿತ ಕಾನೂನು ಕಾಲೇಜು, ಐಟಿಐ, ಡಿಪ್ಲೊಮಾ, ಬಿ.ಎಡ್ ಕಾಲೇಜು ಸೇರಿ ಹೈಟೆಕ್ ಗ್ರಂಥಾಲಯಗಳು, ಸ್ಪರ್ಧಾತ್ಮಕವಾಗಿ ಪರೀಕ್ಷಾರ್ಥಿಗಳಿಗಾಗಿ ಕೋಚಿಂಗ್ ಸೆಂಟರ್ ಇಲ್ಲದಾಗಿದೆ.

    ಕೆರೆಗಳ ಶುದ್ಧೀಕರಣ ಅರ್ಕಾವತಿ ನದಿಯೂ ತಾಲೂಕಿನ ಹಲವು ಕೆರಗಳ ಮೂಲಕ ಹಾದು ಹೋಗುತ್ತದೆ. ಈ ಭಾಗದಲ್ಲಿನ ಹಲವಾರು ಗ್ರಾಮಗಳಿಗೆ ಜೀವನಾಡಿಯಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ಆದರೆ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಕೆರೆಗಳಿಗೆ ನೀರು ಹರಿಯದಂತಾಗಿದೆ. ಪ್ರಮುಖವಾಗಿ ಅರ್ಕಾವತಿಯ ಒಡಲಾಗಿರುವ ದೊಡ್ಡತುಮಕೂರು, ಚಿಕ್ಕತುಮಕೂರು, ವೀರಾಪುರ, ಮಜರಾ ಹೊಸಹಳ್ಳಿ, ಬಾಶೆಟ್ಟಿಹಳ್ಳಿ ಸೇರಿ ಇಲ್ಲಿನ ಹತ್ತಾರು ಹಳ್ಳಿಗಳಿಗೆ ಕೈಗಾರಿಕಾ ಪ್ರದೇಶ ಮತ್ತು ನಗರದ ಯುಜಿಡಿ ನೀರು ಕೆರೆಗಳ ಒಡಲನ್ನು ಸೇರುತ್ತಿದೆ. ಸರ್ಕಾರಿ ಅಧಿಕಾರಿಗಳೇ ನಡೆಸಿರುವ ಪರೀಕ್ಷೆಗಳಲ್ಲಿ ಇಲ್ಲಿನ ನೀರು ಕುಡಿಯುವುದಕ್ಕೂ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಇಲ್ಲಿನ ಗ್ರಾಮಸ್ಥರು ಕೆರೆಗಳ ಶುದ್ಧೀಕರಣಕ್ಕಾಗಿ ಆಗ್ರಹಿಸಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಮತದಾನ ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದ ವೇಳೆ ಚುನಾವಣಾಧಿಕಾರಿಗಳು ಸರಿಪಡಿಸುವ ಲಿಖಿತ ಭರವಸೆ ನೀಡಿದ್ದರು. ಕೆರೆಗಳ ಶುದ್ಧೀಕರಣ ಅತ್ಯಗತ್ಯವಾಗಿದೆ.

    ಶಾಶ್ವತ ಕುಡಿಯುವ ನೀರಿನ ಯೋಜನೆ ನಗರ ಭಾಗಕ್ಕೆ ಕುಡಿಯುವ ನೀರಿಗಾಗಿ ಜಕ್ಕಲಮಡು ನೀರನ್ನೇ ಅವಲಂಬಿಸಲಾಗಿದೆ. ಸದ್ಯ ಉತ್ತಮ ಮಳೆಯಾಗಿರುವುದರಿಂದ ನೀರಿಗೆ ಹಾಹಾಕಾರ ಕಾಣಿಸುತ್ತಿಲ್ಲ. ಬೇಸಿಗೆ, ಬರಗಾಲ ಸೃಷ್ಟಿಯಾದರೆ ನೀರಿಗೆ ಹಾಹಾಕಾರ ಕಟ್ಟಿಟ್ಟ ಬುತ್ತಿ. ಕೆರೆಗಳ ಭರ್ತಿಗಾಗಿ ಶೀಘ್ರವಾಗಿ ಎತ್ತಿನ ಹೊಳೆ ಯೋಜನೆ ತರುವ ಕೆಲಸ ಆಗಬೇಕಿದೆ.

    ನೇಕಾರರಿಗೆ ವಾಣಿಜ್ಯ ಸಂಕೀರ್ಣ ನಗರದಲ್ಲಿ ನೇಕಾರಿಕೆಯನ್ನೇ ಕುಲ ಕಸುಬನ್ನಾಗಿ ಮಾಡಿಕೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ನೇಕಾರರ ಸೀರೆಗಳು ಇತರ ಉತ್ಪನ್ನಗಳಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇದೆ. ಆದರೆ ಮೂಲ ನೇಕಾರರಿಗೆ ಯಾವುದೇ ಬ್ರ್ಯಾಂಡ್ ಮತ್ತು ಮಾರಾಟಕ್ಕೆ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಇಲ್ಲದೆ ಪರಿತಪಿಸುವಂತಾಗಿದೆ. ನೂತನ ಶಾಸಕರು ನೇಕಾರರ ನೇರವಿಗೆ ಧಾವಿಸಬೇಕಿದೆ.

    ಜಿಲ್ಲಾಸ್ಪತ್ರೆಗೆ ಭೂಮಿಪೂಜೆ: ಕಳೆದ ಸರ್ಕಾರದಲ್ಲಿ ತಾಲೂಕಿಗೆ ಜಿಲ್ಲಾಸ್ಪತ್ರೆ ಮಂಜೂರಾಗಿದ್ದರೂ ಈವರೆಗೆ ಸಂಪುಟ ಸಭೆಗಳಲ್ಲಿ ಮಾತ್ರ ಅನುಮೋದನೆ ಸಿಗುತ್ತಿಲ್ಲ. ನೂತನ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಧೀರಜ್ ಅವರು ಅನುಮೋದನೆ ಕೊಡಿಸಿ, ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts