

ಗುಳೇದಗುಡ್ಡ: ಪಟ್ಟಣದ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಂಜಲಿ ಮುಂಡಾಸದ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಅವರ ಮನೆಗೆ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತಮ್ಮ ಕುಟುಂಬ ಸದಸ್ಯರೊಂದಿಗೆ ನಾವಿದ್ದೇವೆ. ಧೈರ್ಯವಾಗಿರಿ, ಹೆದರಬೇಡಿ. ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವ ಪ್ರಯತ್ನ ನಾವು ಮಾಡುತ್ತೇವೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ತಾವು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕರು ಭರವಸೆ ನೀಡಿದರು.
ಮೃತ ವಿದ್ಯಾರ್ಥಿನಿ ತಾಯಿ ರಾಜೇಶ್ವರಿ, ಅಜ್ಜ ಶ್ರೀಶೈಲಪ್ಪ ಅವರು, ನಮ್ಮ ಮಗಳಿಗೆ ಆದಂತೆ ಇನ್ನಾರಿಗೂ ಈ ರೀತಿ ಆಗಬಾರದು. ನಮಗೆ ನ್ಯಾಯ ಕೊಡಿ. ಮಗಳ ಆತ್ಮಕ್ಕೆ ಶಾಂತಿ ದೊರಕಿಸಿರಿ ಎಂದು ಶಾಸಕರ ಎದುರು ಕಣ್ಣೀರು ಹಾಕಿದರು. ಶಾಸಕ ಬಿ.ಬಿ. ಚಿಮ್ಮನಕ್ಕಟ್ಟಿ ಅವರು ವಿದ್ಯಾರ್ಥಿನಿ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ವೈ.ಆರ್.ಹೆಬ್ಬಳ್ಳಿ, ಗೋಪಾಲ ಭಟ್ಟಡ, ಮೂಕಪ್ಪ ಹೂನೂರ, ಯಲಗುರ್ದಪ್ಪ ಗೌಡರ ಮತ್ತಿತರರು ಇದ್ದರು.