

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(MK Stalin) ಮಂಗಳವಾರ(ಏಪ್ರಿಲ್ 15) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಅವರು ರಾಜ್ಯಕ್ಕೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಇದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಲು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದರು.
ಸ್ಟಾಲಿನ್ ಅವರ ಪ್ರಸ್ತಾವನೆಯ ಮೇರೆಗೆ, ರಾಜ್ಯಕ್ಕೆ ಸ್ವಾಯತ್ತತೆಯನ್ನು ಶಿಫಾರಸು ಮಾಡುವ ಜತೆಗೆ ಹಕ್ಕುಗಳನ್ನು ಮರಳಿ ಪಡೆಯಲು ಪ್ರಯತ್ನಿಸುವ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾದ ವಿವಿಧ ಮಸೂದೆಗಳಿಗೆ ರಾಜ್ಯಪಾಲ ಆರ್.ಎನ್.ರವಿ ಅನುಮೋದನೆ ನೀಡಲು ನಿರಾಕರಿಸಿದ ಸಮಯದಲ್ಲಿ ಸಿಎಂ ಸ್ಟಾಲಿನ್ ರಾಜ್ಯಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಇದು ಡಿಎಂಕೆ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಘರ್ಷಣೆಗೂ ಕಾರಣವಾಯಿತು.
ಶಿಫಾರಸಿಗಾಗಿ ರಚಿಸಲಾದ ಸಮಿತಿಯು ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರ ನೇತೃತ್ವದಲ್ಲಿರುತ್ತದೆ. ನಿವೃತ್ತ ಐಎಎಸ್ ಅಶೋಕ್ ವರ್ಧನ್ ಶೆಟ್ಟಿ ಮತ್ತು ಎಂಯು ನಾಗರಾಜನ್ ಈ ಸಮಿತಿಯಲ್ಲಿ ಇನ್ನಿಬ್ಬರು ಸದಸ್ಯರಾಗಲಿದ್ದಾರೆ. ಸಮಿತಿಯು 2026ರ ಜನವರಿ ಅಂತ್ಯದ ವೇಳೆಗೆ ರಾಜ್ಯಕ್ಕೆ ಮಧ್ಯಂತರ ವರದಿಯನ್ನು ಮತ್ತು ಎರಡು ವರ್ಷಗಳೊಳಗೆ ಪೂರ್ಣ ವರದಿಯನ್ನು ಸಲ್ಲಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಬಗ್ಗೆಯೂ ಸಮಿತಿ ಶಿಫಾರಸುಗಳನ್ನು ನೀಡಲಿದೆ.
ನೀಟ್ ಪರೀಕ್ಷೆಯಿಂದಾಗಿ ನಾವು ಅನೇಕ ವಿದ್ಯಾರ್ಥಿಗಳನ್ನು ಕಳೆದುಕೊಂಡಿದ್ದೇವೆ. ನಾವು ನೀಟ್ ಪರೀಕ್ಷೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದೇವೆ. ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯ ಹೆಸರಿನಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ. ನಾವು NEP ಅನ್ನು ಸ್ವೀಕರಿಸದ ಕಾರಣ ಕೇಂದ್ರ ಸರ್ಕಾರವು ರಾಜ್ಯಕ್ಕೆ 2500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕು ಎಂದು ವಿಧಾನಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.(ಏಜೆನ್ಸೀಸ್)