ಅಬ್ಬಾ... ಪಿಯುಸಿ ಪರೀಕ್ಷೆ ನಡೆಸಲ್ವಂತೆ, ನಿಟ್ಟುಸಿರುಬಿಟ್ಟ ವಿದ್ಯಾರ್ಥಿಗಳು, ಆನ್​ಲೈನ್​ ಅಭಿಯಾನಕ್ಕೆ ಮಣಿದ ಸರ್ಕಾರ

PUC exam in mizoram
Published on

ಐಜ್ವಾಲ್​: ವಿದ್ಯಾರ್ಥಿಗಳು ಹಾಗೂ ಸರ್ಕಾರದ ನಡುವಿನ ಸೆಣಸಾಟದಲ್ಲಿ ಕೊನೆಗೂ ವಿದ್ಯಾರ್ಥಿಗಳು ಜಯ ಗಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದ್ದ ಪಿಯುಸಿ ಪರೀಕ್ಷೆಯನ್ನು ಮುಂದೂಡಲು ಮಿಜೋರಾಂ ಸರ್ಕಾರ ಒಪ್ಪಿಕೊಂಡಿದೆ.

ಹೈಯರ್​ ಸೆಕೆಂಡರಿ ಸ್ಕೂಲ್​ ಲೀವಿಂಗ್​ ಸರ್ಟಿಫಿಕೆಟ್​ (ಎಚ್​ಎಸ್​ಎಸ್​ಎಲ್​ಸಿ- ಅಂದರೆ ನಮ್ಮಲ್ಲಿನ ಪಿಯುಸಿ) ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಮಿಜೋರಾಂ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿದೆ.

ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಅನಿವಾರ್ಯವಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಡಳಿ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಚ್​ಎಸ್​ಎಸ್​ಎಲ್​ಸಿ ಮೂರು ವಿಷಯಗಳ ಪರೀಕ್ಷೆ ಬಾಕಿ ಉಳಿದಿದೆ. ಇದಕ್ಕಾಗಿ ಏಪ್ರಿಲ್​ 22ರಿಂದ 24ರವರೆಗೆ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವ ಲಾಲ್​ಚಂದ್ಮಾ ರಾಲ್ಟೆ ಘೋಷಿಸಿದ್ದರು. ಆದರೆ, ಇದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ಎದುರಾಗಿತ್ತು. ನೋ ಎಕ್ಸಾಂ, ನೋ ರಿಸ್ಕ್​ ಎಂದು ಆನ್​ಲೈನ್​ನಲ್ಲಿ ಅಭಿಯಾನವನ್ನು ಆರಂಭಿಸಿದ್ದರು. ಬೇರೆಡೆ ತೆರಳಿರುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದ್ದರು.

ಮಿಜೋರಾಂನಲ್ಲಿ ಈವರೆಗೆ ಕೇವಲ ಒಂದು ಕೋವಿಡ್​ ಪ್ರಕರಣವಷ್ಟೇ ವರದಿಯಾಗಿದೆ. ಉಳಿದಂತೆ ಕ್ವಾರಂಟೈನ್​ 768 ಜನರನ್ನು ಇರಿಸಲಾಗಿತ್ತು. ಆ ಪೈಕಿ 588 ಜನರು ಕ್ವಾರಂಟೈನ್​ ಅವಧಿ ಪೂರೈಸಿದ್ದು, ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. ಹೀಗಾಗಿ ಮಿಜೋರಾಂ ಬಹುತೇಕ ಕರೊನಾ ಮುಕ್ತವಾಗಿದೆ. ಈ ಕಾರಣಕ್ಕಾಗಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net