ಕಾಣೆಯಾದ ಪಾಲಿಕೆ ಟೈಗರ್!, ಪುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಸ್ಥಗಿತ

2 Min Read
ಕಾಣೆಯಾದ ಪಾಲಿಕೆ ಟೈಗರ್!, ಪುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಸ್ಥಗಿತ
ಮಂಗಳೂರು ನಗರದ ಪುಟ್‌ಪಾತ್‌ಗಳಲ್ಲಿ ವ್ಯಾಪಾರ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೆಂದರೆ ಕೆಲವೆಡೆ ಇಡೀ ಫುಟ್‌ಪಾತೇ ಒಂದು ಮಾರ್ಕೆಟ್ ಆಗಿ ಪರಿವರ್ತನೆಗೊಳ್ಳುತ್ತಿದೆ.

ಕಾವ್ಯ ಕೆ. ಕಾಞಂಗಾಡ್

ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿಗೆ ಪುಟ್‌ಪಾತ್ ಅತಿಕ್ರಮಣದ ಬರೆ ಬಿದ್ದಿದೆ. ಈ ಹಿಂದೆ ನಗರದ ಹಲವೆಡೆ ಪುಟ್‌ಪಾತ್, ರಾಜರಸ್ತೆಗಳನ್ನು ಅತಿಕ್ರಮಿಸಿ ವ್ಯವಹಾರ ನಡೆಸುವ ಅಂಗಡಿಗಳನ್ನು ಪಾಲಿಕೆಯಿಂದ ಟೈಗರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಪುಟ್‌ಪಾತ್, ರಸ್ತೆ ಅತಿಕ್ರಮಣ ಹೆಚ್ಚಾಗಿದ್ದು, ಪಾಲಿಕೆಯ ಟೈಗರ್ ಕಾಣೆಯಾಗಿದೆ.

ಮಂಗಳೂರು ನಗರದ ಪುಟ್‌ಪಾತ್‌ಗಳಲ್ಲಿ ವ್ಯಾಪಾರ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೆಂದರೆ ಕೆಲವೆಡೆ ಇಡೀ ಫುಟ್‌ಪಾತೇ ಒಂದು ಮಾರ್ಕೆಟ್ ಆಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬಹುತೇಕ ಕಡೆ ವಾಹನಗಳ ಸಂಚಾರಕ್ಕೂ ತೊಡಕಾಗುತ್ತಿದೆ. ಬೀದಿ ಬದಿ ವ್ಯಾಪಾರಸ್ಥರಲ್ಲಿ ಅನೇಕ ಮಂದಿ ಸಂಪೂರ್ಣ ಫುಟ್‌ಪಾತನ್ನು ಆವರಿಸಿಕೊಂಡಿದ್ದಾರೆ. ನಗರದ ಹೆಚ್ಚು ಜನಸಂಚಾರ ಇರುವ ಸ್ಥಳಗಳು ಫುಟ್‌ಪಾತ್ ಅಂಗಡಿಗಳ ಪಾಲಾಗಿದ್ದು, ಫುಟ್‌ಪಾತ್ ವ್ಯಾಪಾರಿಗಳು ಸಾರ್ವಜನಿಕರನ್ನೇ ಗದರಿಸುವ ಹಂತಕ್ಕೆ ತಲುಪಿದ್ದಾರೆ.

*ಆಸ್ಪತ್ರೆ ರಸ್ತೆಯನ್ನೂ ಬಿಡದ ವ್ಯಾಪಾರಿಗಳು

ಲೇಡಿಗೋಶನ್ ಆಸ್ಪತ್ರೆಯಿಂದ ಸೆಂಟ್ರಲ್ ಮಾರ್ಕೆಟ್ ಕಡೆಗೆ ಹೋಗುವ ಫುಟ್ಪಾತ್‌ನಲ್ಲಿ ನಡೆದುಕೊಂಡು ಪಾದಚಾರಿಗಳು ಹೋಗಲು ಒಂದಿಂಚು ಕೂಡ ಸ್ಥಳಾವಕಾಶವಿಲ್ಲ. ನಡೆದುಕೊಂಡು ಹೋಗುವವರು ರಸ್ತೆಯಲ್ಲೇ ಹೋಗುತ್ತಿದ್ದಾರೆ. ಫುಟ್‌ಪಾತ್‌ನ್ನು ಅಭಿವೃದ್ಧಿಗೊಳಿಸಿ ಸುವ್ಯವಸ್ಥಿತವಾಗಿದ್ದರೂ ಅದರಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಫುಟ್‌ಪಾತ್‌ನಲ್ಲಿ ತರಹೇವಾರಿ ಅಂಗಡಿಗಳನ್ನು ಬೇಕಾಬಿಟ್ಟಿ ಎಂಬಂತೆ ಬಿಡಿಸಿಡಲಾಗಿದೆ. ಈ ಪೈಕಿ ಅನೇಕ ಮಂದಿ ಎಲ್ಲೋ ಪರವಾನಗಿ ಪಡೆದು ಇನ್ನೆಲ್ಲೋ ವ್ಯಾಪಾರ ನಡೆಸುವವರಿದ್ದಾರೆ.

—————-

ಮಾಮೂಲಿ ಸಿಗದಿದ್ದರೆ ಟೈಗರ್ ಕಾರ್ಯಾಚರಣೆ

ನಗರದ ಕೇಂದ್ರ ಭಾಗವೆನಿಸಿರುವ ಮಿಲಾಗ್ರಿಸ್, ಹಂಪನಕಟ್ಟೆ ಭಾಗದಲ್ಲಿ ಅಗಲವಾದ ಫುಟ್‌ಪಾತ್‌ಗಳ ನಿರ್ಮಾಣವಾಗಿದ್ದರೂ ಪಕ್ಕದ ಅಂಗಡಿಯವರು ಫುಟ್‌ಪಾತ್ ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಕೆಲವು ಬೀದಿಬದಿ ವ್ಯಾಪಾರಸ್ಥರು ಕೂಡ ಫುಟ್ ಪಾತ್‌ನಲ್ಲೇ ಸರಕುಗಳನ್ನಿಟ್ಟು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ದಿನ ಕಳೆದಂತೆ ಫುಟ್‌ಪಾತ್ ಕಿರಿದಾಗುತ್ತಿದೆ. ಪಾದಚಾರಿಗಳ ಬಳಕೆಗೆ ಪುಟ್‌ಪಾತ್ ಸಿಗುತ್ತಿಲ್ಲ. ನೆಹರೂ ಮೈದಾನ ರಸ್ತೆ ಲೇಡಿಗೋಶನ್ ಕಡೆಯಿಂದ ರಾವ್ ಆ್ಯಂಡ್ ವೃತ್ತದ ಕಡೆಗೆ ಹೋಗುವ ಮೈದಾನ ಮುಖ್ಯ ರಸ್ತೆಯ ಫುಟ್‌ಪಾತ್ ಕೂಡ ಪಕ್ಕದ ಅಂಗಡಿಗಳ ಪಾಲಾಗುತ್ತಿದೆ. ಕೆಲವರು ಅಂಗಡಿಯ ಸಾಮಗ್ರಿಗಳನ್ನು ಫುಟ್‌ಪಾತ್‌ನ ಮೇಲೆ ಇಡುತ್ತಿದ್ದಾರೆ. ಇನ್ನು ಕೆಲವು ಬೀದಿ ಬದಿ ವ್ಯಾಪಾರಸ್ಥರು ಫುಟ್‌ಪಾತ್ ನಡುವೆಯೇ ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಲಭ್ಯ ಮಾಹಿತಿಯಂತೆ ಪಾಲಿಕೆಯ ಕೆಳಹಂತದ ಸಿಬ್ಬಂದಿಸಹಕಾರದಿಂದಲೇ ಇಲ್ಲಿ ಹಲವರು ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಆರೋಪ ಇದೆ. ಈ ವ್ಯಾಪಾರಿಗಳು ಪ್ರತಿನಿತ್ಯ ಮಾಮೂಲು ಹಣ ನೀಡದಿದ್ದರೆ ಮಾತ್ರ ಟೈಗರ್ ಕಾರ್ಯಾಚರಣೆ ಪಾಲಿಕೆಯಿಂದಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ.

See also  ಇಂದು ಮಂಗಳೂರು ದಸರಾಕ್ಕೆ ಚಾಲನೆ

—————-

ಈ ಹಿಂದೆ ವಾಹನಗಳ ಸಂಚಾರಕ್ಕೆ ತೊಡಕಾಗುವ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ವ್ಯಾಪಾರಸ್ಥರನ್ನು ತೆರವುಗೊಳಿಸುವ ಕಾರ್ಯಾಚರಣೆ ಮಹಾನಗರ ಪಾಲಿಕೆ ಮತ್ತು ಪೊಲೀಸರಿಂದ ನಡೆಯುತ್ತಿತ್ತು. ಸದ್ಯ ಪೊಲೀಸರು ಇಂತಹ ಅನೌನ್ಸ್ ಮೆಂಟ್ ಕೂಡ ಮಾಡುತ್ತಿಲ್ಲ. ಕಾರ್ಯಾಚರಣೆಯೂ ನಡೆಯುತ್ತಿಲ್ಲ.

ರಕ್ಷಿತ್ ಸಾಲ್ಯಾನ್, ಮಂಗಳೂರು ನಿವಾಸಿ

—————–

ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ, ಪುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಾರ್ವಜನಿಕರಿಂದ ಹಲವು ಬಾರಿ ದೂರು ಬಂದ ಹಿನ್ನೆಲೆಯಲ್ಲಿ ಸದ್ಯದಲ್ಲೇ ಟೈಗರ್ ಕಾರ್ಯಾಚರಣೆ ನಡೆಸಿ ಅತಿಕ್ರಮಿತ ರಸ್ತೆ, ಪುಟ್‌ಪಾತ್ ತೆರವುಗೊಳಿಸಲಾಗುವುದು.

ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಮಂಗಳೂರು

Share This Article