ಊರು ಬಿಟ್ಟ ಬಾಲಕ ತಾಸಿನೊಳಗೆ ಪತ್ತೆ : ಪ್ಲಸ್‌ವನ್‌ಗೆ ಸೀಟು ಲಭಿಸದ ಚಿಂತೆ

Published on

ಕಾಸರಗೋಡು: ಪ್ಲಸ್‌ವನ್ ತರಗತಿಗೆ ಸೀಟು ವಂಚಿತ ಬಾಲಕನೊಬ್ಬ ಊರು ಬಿಟ್ಟಿದ್ದು, ಈ ಬಗ್ಗೆ ದೂರು ಲಭಿಸಿದ ತಾಸುಗಳೊಳಗೆ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂಬಳೆ ಪೊಲೀಸ್‌ಠಾಣೆ ವ್ಯಾಪ್ತಿಯ 15ರ ಹರೆಯದ ಬಾಲಕ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರಾಜ್ಯದ ಎಲ್ಲ ಠಾಣೆಗಳಿಗೂ ಸಂದೇಶ ರವಾನಿಸಿದ್ದು, ಈ ಮಧ್ಯೆ ತಿರೂರು ಪೇಟೆಯಲ್ಲಿ ಅಪರಿಚಿತ ಬಾಲಕನೊಬ್ಬ ಪತ್ತೆಯಾಗಿರುವ ಬಗ್ಗೆ ಅಲ್ಲಿನ ಆಟೋರಿಕ್ಷಾ ಚಾಲಕರು ಮಾಹಿತಿ ನೀಡಿದ್ದರು. ಅಲ್ಲಿನ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕುಂಬಳೆಯಿಂದ ನಾಪತ್ತೆಯಾಗಿರುವ ಬಾಲಕನೆಂದು ಮಾಹಿತಿ ಲಭಿಸಿತ್ತು.

ಕುಂಬಳೆ ಠಾಣೆ ಎಸ್.ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ತಿರೂರಿಗೆ ತೆರಳಿ ಬಾಲಕನನ್ನು ಊರಿಗೆ ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ. ಈತನನ್ನು ವಿಚಾರಿಸಿದಾಗ ತನಗೆ ಪ್ಲಸ್‌ವನ್ ತರಗತಿಗೆ ಸೀಟು ಲಭ್ಯವಾಗದಿರುವುದರಿಂದ ಊರು ಬಿಡುವ ತೀರ್ಮಾನ ಕೈಗೊಂಡಿದ್ದಾಗಿ ಪೊಲೀಸರಲ್ಲಿ ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net