ಕ್ಷುಲ್ಲಕ ಕಾರಣಕ್ಕೆ ಮಗನ ಎರಡೂ ಕೈಗಳಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿದ ತಂದೆ..!

rod
Published on

ಅಂಗುಲ್: ಮಕ್ಕಳು ಮುಗ್ಧರು ಮತ್ತು ಆಗಾಗ್ಗೆ ಅವರು ಕೆಲವು ಕೀಟಲೆಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಶಾಲೆಗೆ ಅಥವಾ ಟ್ಯೂಷನ್‌ಗೆ ಹೋಗಲೂ ಇಷ್ಟಪಡದ ಮಕ್ಕಳಿದ್ದಾರೆ. ಆದರೆ ಕ್ಷುಲ್ಲಕ ಕಾರಣಕ್ಕೆ 12 ವರ್ಷದ ಮಗನಿಗೆ ತಂದೆಯೊರ್ವ ಥಳಿಸಿ, ಎರಡೂ ಕೈಗಳಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿರುವ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಚೆಂಡಿಪಾಡಾದ ಹಟಿಯಾನಲಿ ಗ್ರಾಮದಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಸುಭಾಶ್​ ಹಾಗೂ ಆತನ ಮಲತಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಮೊದಲ ಪತ್ನಿ ದೂರವಾದ ಬಳಿಕ ಸುಭಾಷ್, ಮಂಜುಲತಾ ಎಂಬಾಕೆಯನ್ನು ವಿವಾಹವಾಗಿದ್ದನು. ಆದರೆ, ಎರಡನೇ ಮದುವೆಯಾದ ಕೂಡಲೇ ಮೊದಲ ಪತ್ನಿ ಮಗ ಚಿತ್ರಹಿಂಸೆ ಹಾಗೂ ಕಿರುಕುಳಕ್ಕೆ ಒಳಗಾಗಿದ್ದನು.

ಇದನ್ನೂ ಓದಿ: ರುಂಡವಿಲ್ಲದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ..!

ಬಾಲಕನು ಶಾಲೆಗೆ ತಪ್ಪದೇ ಶಾಲೆಗೆ ಹೋಗುತ್ತಿದ್ದನು. ಆದರೆ ಕೆಲವು ದಿನಗಳ ಹಿಂದೆ ಆತನ ಮಲತಾಯಿ ಶಾಲೆಗೆ ಹೋಗದಂತೆ ಹೇಳಿದ್ದಾಳೆ. ಆದರೆ ಬಾಲಕ ಇದನ್ನು ಧಿಕ್ಕರಿಸಿ ಶಾಲೆಗೆ ಹೋಗಿ ಬಂದಿದ್ದ. ಈ ವೇಳೆ ಮಲತಾಯಿಯು ಹುಡುಗ ಶಾಲೆಗೆ ಹೋಗುತ್ತಿಲ್ಲ ಎಂದು ಗಂಡನಿಗೆ ಪ್ರಚೋದನೆ ನೀಡಿದ್ದು, ಆತನ ತಂದೆ ಸಿಟ್ಟಿಗೆದ್ದು ಆತನ ಎರಡೂ ಕೈಗಳಿಗೆ ಬಿಸಿ ಕಬ್ಬಿಣದ ರಾಡ್‌ಗಳಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕನ ಕಿರುಚಾಟ ಕೇಳಿ ಆತನ ಅಜ್ಜಿ ಸ್ಥಳಕ್ಕೆ ಧಾವಿಸಿ ಮಧ್ಯ ಪ್ರವೇಶಿಸಿ ಬಾಲಕನನ್ನು ಬಿಡಿಸಿಕೊಂಡಿದ್ದು ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಚೈಲ್ಡ್‌ಲೈನ್ ಸೇವೆಗಳು ಮತ್ತು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ ನಂತರ ಘಟನಾ ಸ್ಥಳಕ್ಕೆ ಆಗಮಿಸಿವೆ. ಬಾಲಕನ ಅಜ್ಜಿಯು ಈ ಬಗ್ಗೆ ಮಾತನಾಡಿದ್ದು, ಈ ಹಿಂದೆಯೂ ಬಾಲಕನಿಗೆ ಕಬ್ಬಿಣ ರಾಡ್​ನಿಂದ ಹೊಡೆಯಲಾಗಿದೆ. ತನ್ನ ಅಳಿಯನ ವಿರುದ್ಧ ಕಠಿಣ ಕ್ರಮ ಕೈಗೊಂಡು ಮೊಮ್ಮಗನಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದ್ದಾಳೆ. ಏತನ್ಮಧ್ಯೆ, ಸುಬಾಷ್ ಮತ್ತು ಮಂಜುಲತಾ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಕರೆದೊಯ್ಯಲಾಗಿದೆ. ಆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net