ಸಚಿವ ಉಮೇಶ್ ಕತ್ತಿ ನಿಧನ; ಹೃದಯಾಘಾತದಿಂದ ಸಾವು..

Umesh Katti
Published on

ಬೆಂಗಳೂರು: ಸಚಿವ ಉಮೇಶ್ ಕತ್ತಿ (61) ಅವರು ಇಂದು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ಇಂದು ಅವರು ತಮ್ಮ ಮನೆಯಲ್ಲಿದ್ದಾಗ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಾತ್​ರೂಮ್​ನಲ್ಲಿ ಕುಸಿದುಬಿದ್ದಿದ್ದರು. ಊಟ ಮಾಡಿರಲಿಲ್ಲ. ಬಳಿಕ ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರ ಆರೋಗ್ಯ ಸ್ಥಿತಿಯ ಮೇಲೆ ತೀವ್ರ ಗಮನ ಇರಿಸಿ, ಚಿಕಿತ್ಸೆ ನೀಡುತ್ತಿದ್ದರು. ಅದಾಗ್ಯೂ ಚಿಕಿತ್ಸೆ ಫಲಿಸದೆ ಅವರು ಇಂದು ರಾತ್ರಿ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. | ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಇವರು 1961ರ ಮಾ. 14ರಂದು ಜನಿಸಿದ್ದರು. ಬೆಳಗಾವಿ ಜಿಲ್ಲೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದ ಇವರು ಆಹಾರ ಮತ್ತು ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇವರು ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಅತ್ಯಂತ ಹಿರಿಯ ಶಾಸಕ. ಜನತಾ ಪರಿವಾರದಲ್ಲಿದ್ದ ಇವರು, ಕಾಂಗ್ರೆಸ್​​ಗೆ ಸೇರಿ, ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net