ಉಮೇಶ್​ ಕತ್ತಿಗೆ ಹಿಗ್ಗಾಮುಗ್ಗಾ ತರಾಟೆ! ಟಿವಿ, ಬೈಕ್‌, ಫ್ರಿಡ್ಜ್‌ ಉಳ್ಳವರು ಓದಲೇಬೇಕಾದ ಸುದ್ದಿ ಇದು

umesh katti
Published on

ಬೆಂಗಳೂರು: ಬೈಕ್‌, ಫ್ರಿಡ್ಜ್‌, ಟಿವಿ ಇದ್ದವರಿಗೆ ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ ಎಂದಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಕತ್ತಿ ಹೇಳಿಕೆಯಿಂದ ಸರ್ಕಾರ ಭಾರಿ ಮುಜುಗರಕ್ಕೀಡಾಗಿದೆ.

‘ಪರಿಜ್ಞಾನ ಇಲ್ಲದ ಮಂತ್ರಿ' ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಕೂಡ ಕತ್ತಿ ನಿರ್ಧಾರವನ್ನ ಖಂಡಿಸಿ ಪ್ರತಿಭಟನೆ ನಡೆಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಸ್ವಪಕ್ಷೀಯರೂ ಸಿಡಿದೆದ್ದಿದ್ದಾರೆ, ಎಸ್.ಟಿ.ಸೋಮಶೇಖರ್‌, ಬಿ.ಸಿ. ಪಾಟೀಲ್, ಸುರೇಶ್ ಕುಮಾರ್ ಸೇರಿದಂತೆ ಹಲವರು ಉಮೇಶ್​ ಕತ್ತಿ ಹೇಳಿಕೆ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಸಿಡಿದೆದ್ದ ಸ್ವಪಕ್ಷೀಯರು, ಎಸ್.ಟಿ.ಸೋಮಶೇಖರ್‌, ಬಿ.ಸಿ. ಪಾಟೀಲ್, ಸುರೇಶ್ ಕುಮಾರ್ ಸೇರಿ ಹಲವು ಶಾಸಕರು ಮತ್ತು ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿರಿ ಬಿಪಿಎಲ್​ ಕಾರ್ಡ್​ದಾರರೇ, ಅನ್ನಭಾಗ್ಯ ಯೋಜನೆ ಸ್ವರೂಪ ಬದಲಾಗ್ತಿದೆ.. ಇನ್ಮುಂದೆ 2 ಕೆಜಿ ಅಕ್ಕಿ ಕೊಡ್ತಾರೆ…

350-800 ರೂಪಾಯಿವರೆಗೂ ಸಾಮಾನ್ಯ ಕೂಲಿ ಮಾಡುವವರ ಮನೆಯಲ್ಲೂ ಟಿವಿ ಇರುತ್ತೆ. ಅವರ ಬಿಪಿಎಲ್ ಕಾರ್ಡ್ ಅನ್ನೂ ಕ್ಯಾನ್ಸಲ್ ಮಾಡ್ತೀರಾ? ಎಂದು ಪ್ರಶ್ನಿಸಿದ ವಿ.ಎಸ್ ಉಗ್ರಪ್ಪ, ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಆಗ್ತಿದೆ. ಜನರ ರಕ್ತ ಹೀರುವ ಹೊಸ ತಳಿಯ ಜಿಗಣೆ ಹುಟ್ಟುಕೊಂಡಿವೆ ಎನ್ನುವ ಮೂಲಕ ಕೇಂದ್ರ ಸರ್ಕಾರವನ್ನ ಜಿಗಣೆಗೆ ಹೋಲಿಕೆ ಮಾಡಿದರು.

ಜನರಿಗೆ ಟಿವಿ, ಬೈಕ್ ಬೇಸಿಕ್ ಅವಶ್ಯಕತೆ. ಇವುಗಳು ಇಲ್ಲವಾದರೆ ನಾವೇ ಕೊಡಬೇಕು ಅಂತಾ ಪರಿಸ್ಥಿತಿ ಇದೆ ಎಂದ ಡಿಸಿಎಂ ಅಶ್ವತ್ಥನಾರಾಯಣ, ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಸರಿಯಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೀತಾ ಇದೆ. ಇದರ ವಿರುದ್ಧ ದೊಡ್ಡ ಹೊರಾಟ ಮಾಡಬೇಕಾಗುತ್ತೆ. ಕತ್ತಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ನಾನು ಕೂಡ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಆಹಾರ ಮಂತ್ರಿಯಾಗಿದ್ದೆ. ನಗರದ ಬಡವರಿಗೂ ಬಿಪಿಎಲ್ ಕಾರ್ಡ್ ನೀಡಿದ್ವಿ. ಈಗ ಎರಡೂವರೆ ಸಾವಿರ ಹಣ ಕೊಟ್ರೆ ಟಿವಿ ಸಿಗುತ್ತೆ. ಕೂತಲ್ಲೇ ಬೈಕ್ ತಗೋಬೋದು. ಎಲ್ಲರೂ ಹೊಸ ಬೈಕ್ ತಗೋತಾರಾ? ಹೀಗಂದ ಮಾತ್ರಕ್ಕೆ ಕಾರ್ಡ್ ರದ್ದು ಮಾಡೋದು ಸರಿ ಅಲ್ಲ. ಈಗ ಟಿವಿ- ಬೈಕ್- ಫ್ರಿಡ್ಜ್ ಅಂತಾರೆ. ಮುಂದೆ ಮೊಬೈಲ್ ಅನ್ನೂ ಆ ಪಟ್ಟಿಗೆ ಸೇರಿಸಲಿ... ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು. ಇದನ್ನೂ ಓದಿರಿ ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

ಈಗ ಟಿವಿ ಇಲ್ಲದ ಮನೆಯೇ ಇಲ್ಲ. ಇಎಂಐ ಮೂಲಕ ಬೈಕ್ ಖರೀದಿ ಮಾಡಿದವರಿದ್ದಾರೆ. ಸೆಕೆಂಡ್​ ಹ್ಯಾಂಡ್​ ಬೈಕ್​ ಖರೀದಿಸಿದ್ದವರೂ ಇದ್ದಾರೆ. ಎರಡೂವರೆ ಸಾವಿರ ಹಣ ಕೊಟ್ರೆ ಈಗ ಟಿವಿ ಸಿಗುತ್ತೆ. ಉಮೇಶ್ ಕತ್ತಿ ಹೇಳಿರುವುದು ಅಂತಿಮ ತೀರ್ಮಾನ ಅಲ್ಲ. ಎಲ್ಲವೂ ವ್ಯವಸ್ಥಿತವಾಗಿ ಮಾಡಬೇಕು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಹೀಗೆ ಕತ್ತಿ ಹೇಳಿಕೆ ವಿರುದ್ಧ ವಿಪಕ್ಷ-ಸ್ವಪಕ್ಷದಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ, ವಿಷಯದ ಗಂಭೀರತೆ ಅರಿತ ಸಿಎಂ ಯಡಿಯೂರಪ್ಪ, ಉಮೇಶ್‌ ಕತ್ತಿಗೆ ದೂರವಾಣಿ ಕರೆ ಮಾಡಿ, ಕ್ಲಾಸ್​ ತೆಗೆದುಕೊಂಡಿದ್ದಾರೆ.

ಯಾಕೆ ಈ ರೀತಿ ಹೇಳಿಕೆ ಕೊಡ್ತೀರಾ? ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ. ಅನಗತ್ಯ ಗೊಂದಲ ಹೇಳಿಕೆ ನೀಡಿ ಸರ್ಕಾರ ಮತ್ತು ಪಕ್ಷಕ್ಕೆ ಡ್ಯಾಮೇಜ್ ಮಾಡಬೇಡಿ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ ಎಂದು ಉಮೇಶ್​ ಕತ್ತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net