More

    ಡೊನೇಷನ್, ಶುಲ್ಕ ಹಾವಳಿಗೆ ಕಡಿವಾಣ, ಫೀ ಕೇಳುವ ಶಾಲೆ ಪರವಾನಗಿ ರದ್ದು: ಸಚಿವ ಸುರೇಶ್​ಕುಮಾರ್

    ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಡೊನೇಷನ್ ಮತ್ತು ಫೀಜ್ ಹಾವಳಿಗೆ ಶೀಘ್ರವೇ ಕಡಿವಾಣ ಹಾಕಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಭರವಸೆ ನೀಡಿದ್ದಾರೆ.

    ವಿಜಯವಾಣಿ ಮತ್ತು ದಿಗ್ವಿಜಯ 24X7 ನ್ಯೂಸ್ ಚಾನಲ್ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೊನೇಷನ್ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಹೈಕೋರ್ಟ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ನೀಡಿರುವ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ನೀತಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಶಿಕ್ಷಣವನ್ನು ಇವತ್ತಿಗೂ ಸೇವೆ ಎಂದು ಪರಿಗಣಿಸಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಸಾಕಷ್ಟಿವೆ. ಆದರೆ, ಕೆಲವು ಸಂಸ್ಥೆಗಳು ಇದನ್ನೆ ವ್ಯಾಪಾರಿಕರಣ ಮಾಡಿಕೊಂಡಿವೆ. ಆದ್ದರಿಂದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಅಗತ್ಯವಿರುವ ಸೂಕ್ತ ಕ್ರಮ ಜರುಗಿಸಲಾಗುವುದು. ಕರೊನಾ ಸಂದರ್ಭದಲ್ಲಿ ಶಾಲೆಗಳಲ್ಲಿ ಶುಲ್ಕ ಕೇಳಬಾರದು ಎಂದು ಸೂಚನೆ ನೀಡಲಾಗಿದೆ. ಈ ಬಗ್ಗೆ ಸರ್ಕಾರದ ಆದೇಶಗಳು ಹೊರಬಿದ್ದಿವೆ. ಆದರೂ, ಶುಲ್ಕ ಕೇಳುತ್ತಿರುವ ಬಗ್ಗೆ ದೂರುಗಳು ಬಂದರೆ ಮುಲಾಜಿಲ್ಲದೆ, ಅಂತಹ ಶಾಲೆಗಳ ಪರವಾನಗಿಯನ್ನು ರದ್ದು ಮಾಡುವುದಲ್ಲದೆ, ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದರು.

    ಸಂಬಳ ನಿಲ್ಲಿಸುವಂತಿಲ್ಲ: ಅನುದಾನ ರಹಿತ ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಸಂಬಳ ನಿಲ್ಲಿಸಬಾರದು ಎಂದು ಸೂಚನೆಗಳನ್ನು ನೀಡಲಾಗಿದೆ. ಯಾವ ಸಂಸ್ಥೆಗಳು ಸಂಬಳ ನೀಡಿಲ್ಲ ಎನ್ನುವ ಮಾಹಿತಿ ನೀಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

    ಲಾಕ್​ಡೌನ್ ಬಳಿಕ ಪರೀಕ್ಷೆ: ಕರೊನಾ ಲಾಕ್​ಡೌನ್ ಮುಗಿಯುವ ತನಕ ಯಾವ ಪರೀಕ್ಷೆಗಳನ್ನು ಮಾಡುವ ಪ್ರಶ್ನೆಯೇ ಇಲ್ಲ. ಬಳಿಕ ಪರಿಸ್ಥಿತಿ ನೋಡಿ ತೀರ್ವನಿಸಲಾಗುವುದು. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ಇಲ್ಲದೆ ಪಾಸು ಮಾಡಲಾಗುವುದು ಎನ್ನುವುದು ವದಂತಿ. ಎಷ್ಟೇ ಕಷ್ಟವಾದರೂ ಸರಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡಿಯೇ ತೀರುತ್ತೇವೆ. ಆ ಸಮಯಕ್ಕಾಗಿ ಕಾಯಬೇಕು ಎಂದರು.

    ಗಡಿ ಭಾಗದಲ್ಲಿ ಸಮಸ್ಯೆ: ಕೊನೆಯ ಪಿಯು ಪರೀಕ್ಷೆ ಮುಂದೂಡಿದ್ದು ನನಗೂ ನೋವಿದೆ. ಆದರೆ, ಯಾವ ವಿದ್ಯಾರ್ಥಿಗಳಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪರೀಕ್ಷೆ ಮುಂದೂಡಲಾಯಿತು. ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಗಡಿ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಆಗುತಿತ್ತು. ಆದ್ದರಿಂದಲೇ ಪಿಯು ಕೊನೆ ಪರೀಕ್ಷೆ ಮುಂದೂಡಬೇಕಾಯಿತು ಎಂದರು.

    ದಿನ ಬಿಟ್ಟು ದಿನ ಪರೀಕ್ಷೆ: ಮುಂದೆ ಪರೀಕ್ಷೆ ಮಾಡುವುದಾರೆ, ಒಂದು ದಿನವೂ ಗ್ಯಾಪ್ ನೀಡದೆ ನಡೆಸಬೇಕು ಎಂಬ ಸಲಹೆಗಳು ಬಂದಿವೆ. ಇನ್ನು ಕೆಲವರು ದಿನ ಬಿಟ್ಟು ದಿನ ಒಂದೊಂದು ಪರೀಕ್ಷೆ ಮಾಡಿ ಎಂದು ಹೇಳಿದ್ದಾರೆ. ಎಲ್ಲರ ಸಲಹೆಗಳನ್ನು ಪರಿಗಣಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ಏಪ್ರಿಲ್ ಬಳಿಕವೇ ಪರೀಕ್ಷೆ: ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಕೋರ್ಸ್ ಮತ್ತು ಪದವಿ ಪರೀಕ್ಷೆಗಳು ಏಪ್ರಿಲ್​ನಲ್ಲಿ ಕರೊನಾ ಪರಿಸ್ಥಿತಿ ಸರಿಹೋದ ಬಳಿಕ ನಡೆಸುವ ಸಾಧ್ಯತೆ ಇದೆ ಎಂದರು.

    ಪರೀಕ್ಷೆ ಮುಂದಕ್ಕೆ ಹೋಯಿತು ಎಂದು ವಿದ್ಯಾರ್ಥಿಗಳು ಚಿಂತಿಸಬೇಡಿ. ಇದು ನಮಗೂ ನೋವಿನ ಸಂಗತಿ. ನಿಮ್ಮ ಪರಿಸ್ಥಿತಿ ನಮಗೂ ಅರ್ಥವಾಗುತ್ತದೆ. ಕರೊನಾ ವಿರುದ್ಧ ಸೆಣಸಾಡಲು ಈ ಕ್ರಮ ಅನಿವಾರ್ಯ. ಕರೊನಾ ಇದ್ದಾಗ ಪರೀಕ್ಷೆ ಬರೆಯುವ ನೆನಪು ಮುಂದೆ ನಿಮ್ಮ ಜೀವನದಲ್ಲಿ ಉಳಿಯುವಂತಾಗಬೇಕು. ಅದಕ್ಕಾಗಿ ಕರೊನಾ ಬೇಗ ತೊಲಗಲಿ ಎಂದು ಪ್ರಾರ್ಥಿಸಿಕೊಳ್ಳಿ.

    ಎಸ್.ಸುರೇಶ್​ಕುಮಾರ್ ಶಿಕ್ಷಣ ಸಚಿವ

     

    ರಾಜ್ಯದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ, ಮಂಗಳವಾರ ಒಟ್ಟು 12 ಹೊಸ ಪ್ರಕರಣಗಳು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts