

ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಲಂಚಕ್ಕಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿದೆ. ಈ ಕುರಿತು ಲೋಕಾಯುಕ್ತ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿರುವ ಪತ್ರ ಬಹಿರಂಗವಾಗಿವೆ.
ಮುಳುಬಾಗಿಲು ತಾಲೂಕಿನಲ್ಲಿ ಸಚಿವರು 2 ತಿಂಗಳಿಗೊಮ್ಮೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಾರೆ. ಲಂಚ ಕೊಟ್ಟರೆ ಮಾತ್ರ ಆ ಸ್ಥಾನದಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಾರೆ. ಇಲ್ಲವಾದರೆ ಆ ಅಧಿಕಾರಿಯನ್ನು ವರ್ಗ ಮಾಡುವಂತೆ ತಮ್ಮ ಲೆಟರ್ ಹೆಡ್ನಲ್ಲಿ ಸೂಚಿಸುತ್ತಾರೆ. ಅವರ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆರ್ಟಿಐ ಕಾರ್ಯಕರ್ತ ಮಂಡಿಕಲ್ ನಾಗರಾಜ್ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ನನ್ನ ತಂದೆಯನ್ನು ಬೆಂಗಳೂರು ಅಬಕಾರಿ ವಿಭಾಗಕ್ಕೆ ವರ್ಗಾವಣೆ ಮಾಡಲು ಎಚ್.ನಾಗೇಶ್ 1 ಕೋಟಿ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಸ್ನೇಹಾ ಎಂಬುವರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಬರೆದಿರುವ ಪತ್ರವೂ ಬಹಿರಂಗವಾಗಿದೆ. ಪ್ರಸ್ತುತ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ತಂದೆಗೆ ರಕ್ತದೊತ್ತಡ ಡಯಾಬಿಟೀಸ್, ಕಿಡ್ನಿ ಸಮಸ್ಯೆ ಇದೆ. ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಖಾಲಿ ಇರುವ 2 ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಕೋರಲಾಗಿತ್ತು. ಈ ವೇಳೆ ಅಬಕಾರಿ ಸಚಿವರು ಮದ್ಯವರ್ತಿ ಮೂಲಕ 1 ಕೋಟಿ ರೂ. ಕಳುಹಿಸುವಂತೆ ಸೂಚಿಸಿದ್ದರು. ಈ ಕುರಿತು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾವಾದರೂ ರಾಜ್ಯದ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಪತ್ರದಲ್ಲಿ ವಿವರಿಸಿದ್ದಾರೆ. 2020ರ ಜು.14ರಂದು ಸಲ್ಲಿಸಿರುವ ದೂರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2019ರಲ್ಲಿ ನಾನು ಏನಾದರೂ ಒಂದು ಗುಂಟೆ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದರೆ ಯಾವುದೇ ತನಿಖೆಗೂ ಸಿದ್ದ. ನನ್ನನ್ನು ಅಧಿಕಾರದಿಂದ ಇಳಿಸುವುದು ವಿರೋಧಿಗಳ ಹುನ್ನಾರವಾಗಿದೆ. ಕ್ಷೇತ್ರದ ಜನರಿಗೆ ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇರುವುದರಿಂದ ಆರೋಪಗಳಿಗೆ ಹೆದರುವುದಿಲ್ಲ. | ಎಚ್.ನಾಗೇಶ್ ಅಬಕಾರಿ ಸಚಿವ
ಅಬಕಾರಿ ಸಚಿವರ ಸ್ಪಷ್ಟನೆ
ಲಂಚದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಎಚ್.ನಾಗೇಶ್, ಯಾವೊಬ್ಬ ಅಧಿಕಾರಿಯೂ ವರ್ಗಾವಣೆಗಾಗಿ ನನ್ನನ್ನು ಸಂರ್ಪಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವರ್ಗಾವಣೆಗಾಗಿ ಯಾರಿಂದಲೂ ಲಂಚ ಪಡೆದಿಲ್ಲ. ಸುಳ್ಳು ಸುದ್ದಿ ಹಬ್ಬಿಸಿರುವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.