ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರದ್ದು ಆಚಾರವಿಲ್ಲದ ನಾಲಿಗೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನೇ ಅವರ ಮುಂದಿಡುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಏನಿದೆ ಎಂಬುದನ್ನು ಬಹಿರಂಗ ಪಡಿಸುವಂತೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಲೋಕಸಭೆ ಚುನಾವಣೆ ಮುಗಿದ ಬಳಿಕ ನಾನು ಮೊದಲು ಹೋಗಿದ್ದು ಇದೇ ಮಧು ಬಂಗಾರಪ್ಪ ಅವರ ಮನೆಗೆ. ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದು ಮನವಿ ಮಾಡಿಕೊಂಡಿದ್ದೆ. ಆದರೆ ಬರೀ ಟೀಕೆಗಳನ್ನು ಮಾಡುವುದು ಬಿಟ್ಟರೆ ಜಿಲ್ಲೆಗೆ ನಯಾಪೈಸೆಯ ಕೊಡುಗೆ ಇಲ್ಲ. ಮಾತೆತ್ತಿದ್ದರೆ ಸ್ಮಾರ್ಟ್‌ಸಿಟಿ, ವಿಮಾನ ನಿಲ್ದಾಣ ಕಾಮಗಾರಿಗಳ ತನಿಖೆ ಮಾಡಿಸುತ್ತೇನೆಂದು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ಅದನ್ನೇ ಅವರು ಖಯಾಲಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್, ವಿಸಿಬಿಲಿಟಿ ಸಮಸ್ಯೆ ಮಾತ್ರ ಉಳಿದಿದೆ. ಇದರಿಂದ ಸಾಕಷ್ಟು ತೊಂದರೆ ಆಗುತಿದ್ದು ಸಹಕರಿಸುವಂತೆ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಮಧಿ ಬಂಗಾರಪ್ಪ ಅವರ ಮನೆಗೆ ಹೋಗಿ ಮನವಿ ಮಾಡಿದ್ದೆ. 15ರಿಂದ 20 ಲಕ್ಷ ರೂ. ಅನುದಾನ ನೀಡಿದರೆ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗೆಹರಿಯಲಿದೆ. ಇನ್ನೂ ಮೂರ್ನಾಲ್ಕು ವಿಮಾನಗಳು ಇಲ್ಲಿಂದ ಹಾರಾಟ ನಡೆಸಲಿವೆ. ಆದರೆ ಅದಕ್ಕೆ ಅನುದಾನ ಬಿಡುಗಡೆ ಮಾಡದೇ ವಿಮಾನ ನಿಲ್ದಾಣದ ಕಾಮಗಾರಿಯನ್ನೇ ತನಿಖೆ ಮಾಡಿಸುತ್ತೇನೆ ಎನ್ನುತ್ತಾರೆ. ತನಿಖೆಗೆ ವಹಿಸಿದರೆ ಸ್ವಾಗತಿಸುತ್ತೇನೆ. ಅವರ ಗೊಡ್ಡು ಬೆದರಿಕೆಗಳಿಗೆ ಇಲ್ಲಿ ಯಾರೂ ಹೆದರುವವರಿಲ್ಲ ಎಂದು ಹೇಳಿದರು.