ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಮೂರು ದಿನಗಳ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಸಚಿವರಿಂದ ಚಾಲನೆ *11 ಜೋಡಿ ಎತ್ತುಗಳು ಭಾಗಿ, ಬಳ್ಳಾರಿಯ ಎತ್ತುಗಳಿಗೆ ಪ್ರಥಮ ಸ್ಥಾನ

raichur
raichur
Published on

ರಾಯಚೂರು ಕೃಷಿ ಪ್ರಧಾನವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ಅವಲಂಬಿತವಾಗುವಂತೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಮುನ್ನೂರು ಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವುದರ ಮೂಲಕ ರಾಜ್ಯದಲ್ಲಿ ಮಾದರಿ ಸಮಾಜ ಎಂದು ಹೆಗ್ಗಳಿಕೆ ಪಾತ್ರವಹಿಸಿದೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಕಾರಹುಣ್ಣಿಮೆ ನಿಮಿತ್ತ ಮುನ್ನೂರು ಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ನಿಮಿತ್ತ ಆಯೋಜನೆ ಮಾಡಲಾಗಿದ್ದ ಎತ್ತುಗಳಿಂದ ಒಂದು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ,

ಕಲೆ ಸಂಸ್ಕೃತಿ ಸಾಹಿತ್ಯ, ಜಾನಪದ ಕ್ರೀಡೆ ಹಾಗೂ ಗ್ರಾಮೀಣ ಸೊಗಡು ಹಬ್ಬದ ಮೂಲಕ ಅನಾವರಣಗೊಳಿಸಿ ಪ್ರತಿಭೆಗಳಿಗೆ ಸಮಾಜ ಉತ್ತಮ ವೇದಿಕೆ ಕಲ್ಪಿಸಿದೆ. ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಮತ್ತು ಬೆಲ್ಲ ನರಸರೆಡ್ಡಿ ಅವರ ನೇತೃತ್ವದಲ್ಲಿ ನಡೆಯುವ ಮುಂಗಾರು ಬೆಳ್ಳಿ ಹಬ್ಬ ರಾಜ್ಯದಲ್ಲಿ ಮಾದರಿಯಾಗಿದೆ. ದೇಶವು ಕೃಷಿ ಪ್ರಧಾನವನ್ನು ಅವಲಂಬಿತಗೊಂಡ ದೇಶ, ಕೃಷಿ ಪ್ರಧಾನವಾಗಿ ಆಚರಣೆ ಮಾಡುವ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಭಾರಿ ಜನಪ್ರಿಯತೆ ಪಡೆದುಕೊಂಡಿದೆ ಎಂದರು.

ಪ್ರತಿ ವರ್ಷ ರೈತರು ಕೃಷಿ ಚಟುವಟಿಕೆ ಆರಂಭಿಸಲು ಅವರಿಗೆ ಉತ್ಸವವನ್ನು ತುಂಬುವ ನಿಟ್ಟಿನಲ್ಲಿ ಮತ್ತು ನರಸಿ ಹೋಗುತ್ತಿರುವ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮುನ್ನೂರು ಕಾಪು ಸಮಾಜ ಈ ಭಾಗದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ರಾಜ್ಯದಲ್ಲಿ ಪ್ರತಿಷ್ಠಿತ ಪಡೆದುಕೊಂಡಿದೆ. ಸರ್ಕಾರದಿಂದ ಒಂದು ರೂ.ಕೂಡ ಪಡೆಯದೆ ಕೇವಲ ಸಮಾಜದ ವತಿಯಿಂದ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವುದು ಸಾಮಾನ್ಯದ ವಿಷಯವಲ್ಲ ಎಂದರು.

ಗದ್ವಾಲ್ ಸಂಸ್ಥಾನದ ರಾಜವಂಶಸ್ಥ ಕೃಷ್ಣ ರಾಮ್ ಭೂಪಲ್ ಅವರು ಭಾಗವಹಿಸಿ ಮಾತನಾಡಿ, ಮುನ್ನೂರು ಕಾಪು ಸಮಾಜದಿಂದ ರೈತರು ಕೃಷಿ ಪಾಲನೆಯಲ್ಲಿ ನಿರತರಾಗುವಂತೆ ಮಾಡುವ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಕುರಿತು ಗ ದ್ವಾಲ್ ಸಂಸ್ಥಾನದಲ್ಲಿ ಜನರುಮಾತನಾಡುತ್ತಿದ್ದರು ಆದರೆ ನಾನು ಈ ಹಬ್ಬಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ್ದು ಎತ್ತುಗಳ ಸ್ಪರ್ಧೆಯನ್ನು ನೋಡಿ ಬಹಳ ಸಂತೋಷದಾಯಕವಾಗಿದೆ. ನಿಜಕ್ಕೂ ಈ ಭಾಗದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿಂದೆ ನಮ್ಮ ಮಹಾಸಂಸ್ಥಾನ ರಾಜರು ರಾಯಚೂರು ಜಿಲ್ಲೆಯನ್ನು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಗದ್ವಾಲ್ ಮಹಾಸಂಸ್ಥಾನ ರಾಜ ವಂಶಸ್ಥರನ್ನು ಕರೆಸಿ ಈಗ ಭಾಗದ ಸಂಸ್ಕೃತಿಯನ್ನು ಪರಂಪರೆಯನ್ನು ಪರಿಚಯ ಮಾಡುತ್ತಿರುವ ಮುನ್ನೂರು ಕಾಪು ಸಮಾಜದ ಕಾರ್ಯ ಶ್ಲಾಘನೀಯ ಎಂದರು.

11 ಜೋಡಿ ಎತ್ತುಗಳು ಭಾಗಿ

ಒಂದು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಬಿಜಾಪೂರು, ಬಳ್ಳಾರಿ, ಯಾದಗಿರಿ ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾರೀ ಗಾತ್ರದ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶಿಸಿದವು. 3,600 ಅಡಿ ಭಾರ ಎಳೆಯುವ ಮೂಲಕ ಬಳ್ಳಾರಿ ಜಿಲ್ಲೆಯ ಆಂದ್ರೊಳ ಗ್ರಾಮದ ಆನಂದರೆಡ್ಡಿ ಅವರ ಜೋಡಿ ಎತ್ತುಗಳಿಗೆ 75 ಸಾವಿರ ನಗದು ಪ್ರಥಮ ಬಹುಮಾನ ಪಡೆದುಕೊಂಡಿತ್ತು. 3,456 ಅಡಿ ಭಾರ ಎಳೆದ ದೇವದುರ್ಗ ತಾಲೂಕಿನ ಮಾರಪಳ್ಳಿ ಗ್ರಾಮದ ರವಿಗೌಡ ಅವರ ಜೋಡಿ ಎತ್ತುಗಳಿಗೆ 55 ಸಾವಿರ ನಗದು ದ್ವಿತೀಯ ಬಹುಮಾನ, 3,300 ಅಡಿ ಭಾರ ಎಳೆದ ರಾಯಚೂರು ಜಿಲ್ಲೆಯ ದೇವದುರ್ಗ ರಾಮದುರ್ಗ ಗ್ರಾಮದ ತಿಪ್ಪಯ್ಯ ನಾಯಕ ಅವರ ಜೋಡಿ ಎತ್ತುಗಳಿಗೆ 45 ಸಾವಿರ ನಗದು ತೃತೀಯ ಬಹುಮಾನ ನೀಡಲಾಗಿತು.

ಮೊದಲ ದಿನ ಆರಂಭಗೊಂಡ ಹಬ್ಬವನ್ನು ಸಾರ್ವಜನಿಕರು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಪ್ರತಿ ವರ್ಷಕ್ಕಿಂತ ಈ ಭಾರಿ ಮುಂಗಾರು ಬೆಳ್ಳಿ ಹಬ್ಬಕ್ಕೆ ವೈಭವದ ಮೆರೆಗು ತಂದಿದೆ. ಗಜ ಗಾತ್ರದ ಜೋಡು ಎತ್ತುಗಳ ಶಕ್ತಿ ಪ್ರದರ್ಶನಕ್ಕೆ ಮುಂಗಾರು ಬೆಳ್ಳಿ ಹಬ್ಬಕ್ಕೆ ಹೊಸ ಇತಿಹಾಸಕ್ಕೆ ನಾಂದಿ ಹಾಡಿತು. ಸಾಮಾನ್ಯವಾಗಿಆಂಧ್ರದ ಎತ್ತುಗಳೇ ಅಧಿಕ ಸಂಖ್ಯೆಯಲ್ಲಿ ಬರುವ ಈ ಕಾರ್ಯಕ್ರಮದಲ್ಲಿನ ಈ ಬಾರಿ ಕರ್ನಾಟಕ ಎತ್ತುಗಳ ಭಾರದ ಕಲ್ಲು ಎಳೆಯುವ ಶಕ್ತಿ ಪ್ರದರ್ಶನಕ್ಕೆ ಆತ್ಯಾಧಿಕ ಸಂಖ್ಯೆಯಲ್ಲಿ ಎತ್ತುಗಳು ಬಂದಿರುವುದು ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ವರ್ಚಸ್ಸಿಗೆ ಕೈಗನ್ನಡಿಯಾಗಿತ್ತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿ ಮಾಜಿ ಶಾಸಕ ಎ.ಪಾಪರೆಡ್ಡಿ , ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಜೀ, ಮಲ್ಲಿಕಾರ್ಜುನ ಸ್ವಾಮೀಜಿ, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ,ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಎನ್ ಶಂಕ್ರಪ್ಪ, ಜಯವಂತರಾವ್ ಪತಂಗಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪಾಲಿಕೆ ಉಪಾಧ್ಯಕ್ಷ ಸಾಜೀದ್ ಸಮೀರ್, ಮಹ್ಮಮದ್ ಶಾಲಂ,ಗದರ್ ಬೆಟ್ಟಪ್ಪ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net