ನಗರದ ಯುವ ಜನರಿಗೆ ಗುಬ್ಬೇರು ಬೆಟ್ಟದ ಟ್ರಕ್ಕಿಂಗ್ -ಸಚಿವ ಚಾಲನೆ

raichur
raichur
Published on

ರಾಯಚೂರು ಪಾಲಿಕೆಯಿಂದ ನಡೆಯುವ ಕಾರ್ಯಕ್ರಮಗಳು ಯುವಕರಲ್ಲಿ ಪ್ರೇರಣೆ ಜತೆಗೆ ಪ್ರಗತಿಯ ದಿಕ್ಕಿನತ್ತ ಕೊಂಡೋಯುವುದಕ್ಕೆ ಸಹಕಾರಿ ಯಾಗಿವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಮಹಾನಗರ ಪಾಲಿಕೆಯಿಂದ ಐತಿಹಾಸಿಕ ಗುಬ್ಬೇರು ಬೆಟ್ಟದ ಟ್ರಕ್ಕಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರವನ್ನು ಸುಂದರಗೊಳಿಸುವ ಕಾರ್ಯದಲ್ಲಿ ಪಾಲಿಕೆ ಆಯುಕ್ತರು ವಿವಿಧ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಗರದ ಅಭಿವೃದ್ಧಿ ಹಾಗೂ ಸ್ವಚ್ಛತೆಯ ಕಡೆಗೆ ಯುವಜನತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಮಹಾನಗರ ಪಾಲಿಕೆಯಿಂದ ಯುವಜನತೆಗಾಗಿ, ನಗರ ನಗರಕ್ಕಾಗಿ ಯುವಕರು ಎಂಬ ಶೀರ್ಷಿಕೆಯಲ್ಲಿ ವಿಶಿಷ್ಟ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳಲಾಗಿದ್ದು ಶ್ಲಾಘನೀಯ ಸಂಗತಿಯಾಗಿದೆ ಎಂದರು.

ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಮಹಾನಗರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಪ್ರತಿ ನಾಗರಿಕನ ಜವಾಬ್ದಾರಿಯಾಗಿದ್ದು, ಮುಂದಿನ ಮೂರು ತಿಂಗಳ ಕಾಲ ನಗರದಲ್ಲಿ ಹಲವು ಸಾಂಸ್ಕೃತಿಕ ಹಾಗೂ ವಿಜ್ಞಾನ ಕೇಂದ್ರೀಕೃತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ನಂತರ ಭಾರತೀಯ ರೆಡ್ ಕ್ರಾಸ್ ವತಿಯಿಂದ ನೀಡಲಾಗಿದ್ದ ಅಡುಗೆ ಕಿಟ್‌ಗಳನ್ನು ಪಾಲಿಕೆಯ ಪೌರ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಪ್ರಭಾರಿ ಅಧ್ಯಕ್ಷ ಸಾಜೀದ್ ಸಮೀರ್, ಸದಸ್ಯರಾದ ಜಯಣ್ಣ, ಶರಣಬಸವ ಬಲ್ಲಟಗಿ, ಬಿ. ರಮೇಶ್, ಪ್ರಮುಖರಾದ ರವಿ ಬೋಸರಾಜು, ರುದ್ರಪ್ಪ ಅಂಗಡಿ, ಉಪ ಆಯುಕ್ತ ಸಂತೋಷಿರಾಣಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net