

ವಿಜಯಪುರ: ವಕ್ಫ್ ಆಸ್ತಿ ದೇವರ ಆಸ್ತಿ. ಸಮಾಜದ ಒಳಿತಿಗಾಗಿ ದಾನಿಗಳು ನೀಡಿದ ಆಸ್ತಿ. ಹೀಗಾಗಿ ಈ ಆಸ್ತಿಯಲ್ಲಿ ಹಗರಣ ಮಾಡಿದರೆ ಆತನ ಸಾವು ದುರಂತಮಯವಾಗುತ್ತದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್‌ಅಹ್ಮದ್ ಭಾವನಾತ್ಮಕವಾಗಿ ಮಾತನಾಡಿದರು.
ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವಕ್ಫ್ ಅದಾಲತ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಕ್ಫ್ ಆಸ್ತಿಯಲ್ಲಿ ಲಾಭ, ಸ್ವಾರ್ಥವನ್ನು ಯೋಚಿಸಿದರೆ ಆತನ ಬದುಕು ವಿನಾಶವಾಗುತ್ತದೆ. ಇಲ್ಲಿ ದುಡ್ಡು ಮಾಡುವವರು ಬೇಕಿಲ್ಲ, ದುಡ್ಡು ಮಾಡುವ ಮನೋಭಾವ ಇರುವ ಅಧಿಕಾರಿಗಳು ಈ ಇಲಾಖೆಯಲ್ಲಿನ ಬರಲೇಬೇಡಿ ಎಂದು ತಿಳಿಸಿದ್ದಾಗಿ ಹೇಳಿದರು.
ಪ್ರತಿಯೊಬ್ಬರು ಸೇರಿ ಈ ದೇವರ ಆಸ್ತಿಯನ್ನು ಸಂರಕ್ಷಿಸಬೇಕು, ಈ ಸಂರಕ್ಷಣೆಗಾಗಿಯೇ ಈ ಅದಾಲತ್ ನಡೆಸಲು ಕ್ರಮ ವಹಿಸಲಾಗುತ್ತಿದೆ. ಸರ್ಕಾರದ ಆಸ್ತಿಯವನ್ನು ವಕ್ಫ್ ಅತಿಕ್ರಮಣ ಮಾಡಿಲ್ಲ. ಸರ್ಕಾರವೇ ವಕ್ಫ್ ಆಸ್ತಿ ಪಡೆದಿದೆ. ಈ ಗೊಂದಲದಿಂದ ಹೊರಬನ್ನಿ ಎಂದು ತಿಳಿಸಿದರು.
ಹಜ್ ಭವನವನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಯುವಕರನ್ನು ಸನ್ನದ್ಧು ಮಾಡುವ ನಿಟ್ಟಿನಲ್ಲಿ ಅದನ್ನು ತರಬೇತಿ ಕೇಂದ್ರವನ್ನಾಗಿಯೂ ನೀಡಲಾಗುತ್ತಿದೆ. ಹೀಗಾಗಿ ಅಲ್ಲಿ ತರಬೇತಿ ಪಡೆಯುತ್ತಿರುವ 400 ಜನರಲ್ಲಿ ಕನಿಷ್ಠ 50 ಜನರಾದರೂ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸಾಬೂನು-ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್. ನಾಡಗೌಡ ಮಾತನಾಡಿ, ಇನ್ನೊಂದು ಕರ್ನಾಟಕ ರಚನೆ ಮಾಡುವಷ್ಟು ಆಸ್ತಿ ವಕ್ಫ್‌ನಲ್ಲಿದೆ. ಒಗ್ಗಟ್ಟಿನ ಕೊರತೆ ಹಾಗೂ ಸಣ್ಣಪುಟ್ಟ ವ್ಯಾಜ್ಯಗಳ ಪರಿಣಾಮ ಅದು ಆಸ್ತಿಯಾಗಿ ಬಳಕೆಯಾಗುತ್ತಿಲ್ಲ, ಕಟ್ಟಕಡೆಯ ವ್ಯಕ್ತಿಗೆ ಆರ್ಥಿಕ ಸ್ಥಿರತೆ ಬರಬೇಕು, ಈ ಆರ್ಥಿಕ ಸ್ಥಿರತೆಯನ್ನು ಸ್ಥಾಪಿಸುವಲ್ಲಿ ಅಂಜುಮನ್, ಜಮಾತ್‌ಗಳು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಬೇಕು ಎಂದರು.
ವಕ್ಫ್ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗಾಗಿ ಸಂಘಟನೆ ರೂಪದಲ್ಲಿ ಒಂದುಗೂಡಿಸುವ ಕಾರ್ಯ ಮಾಡಿರುವ ಕಾರ್ಯ ಶ್ಲಾಘನೀಯ, ಈ ಕಾರ್ಯ ಎಂದೋ ನಡೆಯಬೇಕಿತ್ತು ಎಂದರು.
ಸಿಂದಗಿ ಶಾಸಕ ಅಶೊಕ ಮನಗೂಳಿ ಮಾತನಾಡಿ, ವಾಸ್ತವದಲ್ಲಿ ಮುಸ್ಲಿಂ ಬಾಂಧವರು ಅಲ್ಪಸಂಖ್ಯಾತರಲ್ಲ, ಬಹುಸಂಖ್ಯಾತರು. ಸಂಘಟಿತರಾಗಿ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಕರ್ನಾಟಕ ಅಹಲೆ ಸುನ್ನತ ಜಮಾತ್ ರಾಜ್ಯಾಧ್ಯಕ್ಷ ಹಜರತ್ ಸೈಯ್ಯದ್ ತನ್ವೀರ ಪೀರಾ ಹಾಶ್ಮೀ ಆಶೀರ್ವಚನ ನೀಡಿ, ವಕ್ಫ್ ಬೋರ್ಡ್ ವತಿಯಿಂದ ಪ್ರತಿ ಜಿಲ್ಲೆಗೊಂದರಂತೆ ಅತ್ಯಾಧುನಿಕ ಆಂಬ್ಯುಲೆನ್ಸ್ ಸೇವೆ, ಶಿಷ್ಯವೇತನ ಮರು ಆರಂಭ, ವಿದೇಶದಲ್ಲಿ ಕಲಿಕೆಗೆ ಪ್ರೋತ್ಸಾಹ ಮತ್ತಿತರ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.
ವಿಪ ಸದಸ್ಯ ಅಬ್ದುಲ್‌ಜಬ್ಬಾರ್ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ಪುನರ್ ರಚನೆ ಮೂಲಕ ವಕ್ಫ್ ಆಸ್ತಿ ಮರಳಿ ಪಡೆಯುವ ಹುನ್ನಾರ ನಡೆಸಿದೆ. ವಕ್ಫ್ ಆಸ್ತಿ ಬಗ್ಗೆ ದೊಡ್ಡ ವೈಮನಸ್ಸು, ಜಗಳ ನಡೆಯುತ್ತಿದೆ. ಈ ಕಾರಣಕ್ಕೆ ವಿಜಯಪುರದ ಮುಖಂಡರೊಬ್ಬರು ವಕ್ಫ್ ಆಸ್ತಿ ಬಗ್ಗೆ ಮಾತನಾಡುವಂತಾಗಿದೆ ಎಂದರು.
ಜಮಾತ್ ವ್ಯಾಪ್ತಿಯಲ್ಲಿರುವ ಮನೆಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಬೇಕು, ಆದರೆ ದುಡ್ಡು, ಪ್ರಭಾವಿ ಇರುವ ವ್ಯಕ್ತಿಗಳನ್ನು ಹಾಗೂ ಧಾರ್ಮಿಕ ಮಂತ್ರಗಳನ್ನು ಗೊತ್ತಿಲ್ಲದ ವ್ಯಕ್ತಿಗಳನ್ನೇ ಮುತವಲ್ಲಿಗಳನ್ನಾಗಿ ಮಾಡುತ್ತಿರುವುದು ನಮ್ಮ ದುರ್ದೈವ ಎಂದು ವಿಷಾದಿಸಿದರು.
ಅಪರಾಧಿಕ ಕೃತ್ಯಗಳಲ್ಲಿಯೇ ನಮ್ಮ ಸಮಾಜದ ಯುವಕರು ತೊಡಗಿಸಿಕೊಂಡಿರುವುದು ದುರ್ದೈವ, ಈ ರೀತಿಯ ತಪ್ಪುಗಳು ಕಂಡು ಬಂದರೆ ಮುತವಲ್ಲಿಗಳೇ ಪೊಲೀಸ್ ಇಲಾಖೆಗೆ ದೂರು ನೀಡಿ ಯುವಕರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮೌಲಾನಾ ಶಾಕೀರ್ ಸಾಹೇಬ್ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನ್ವರ ಭಾಷಾ, ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕೆಪಿಸಿಸಿ ಸದಸ್ಯ ಅಬ್ದುಲ್‌ಹಮೀದ್ ಮುಶ್ರೀಫ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎಂ. ಅತ್ತಾರ, ಎಸ್.ಎಂ. ಪಾಟೀಲ ಗಣಿಹಾರ ಮತ್ತಿತರರಿದ್ದರು.