ವಿಮಾ ಯೋಜನೆಯಲ್ಲಿ ಮಂಡ್ಯ ಉತ್ತಮ ಸಾಧನೆ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಅಭಿನಂದನೆ

Minister Cheluvarayaswami
Published on

ಮಂಡ್ಯ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಮಂಡ್ಯ ಜಿಲ್ಲೆಯ ಅತ್ಯುತ್ತಮ ಸಾಧನೆಗೆ ಕೇಂದ್ರ ಕೃಷಿ ಸಚಿವಾಲಯದ ಪ್ರಶಂಸೆಗೆ ಪಾತ್ರವಾಗಿರುವುದು ಅಭಿನಂದನೀಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಕೇಂದ್ರ ಕೃಷಿ ಹಾಗೂ ರೈತ ಕ್ಷೇಮಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಫಿಎಂಎಫ್‌ಬಿವೈ ಸಿಇಒ ರಿತೇಶ್ ಚೌಹಾಣ್ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 2022ರ ಖಾರಿಫ್ ಹಾಗೂ 2022-2023ರ ರಬ್ಬಿ ಬೆಳೆಗಳಲ್ಲಿ ಜಿಲ್ಲೆ ಬೆಳೆ ಕಟಾವು ಪರೀಕ್ಷೆ, ವಿಮೆ ಕ್ಲೈಮ್, ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರ ವಿಮೆ ನೋಂದಣಿ ಸರಾಸರಿಯಲ್ಲಿ ಏರಿಕೆ, ವಿಮಾ ಪ್ರದೇಶ ವಿಸ್ತರಣೆ ಮತ್ತಿತರ ಮಾನದಂಡಗಳನ್ನು ಪರಿಗಣಿಸಿ ಸಾಧನೆಯ ಮೌಲ್ಯಮಾಪನ ಮಾಡಲಾಗಿದೆ ಎಂದು ಕೆಂದ್ರ ಕೃಷಿ ಸಚಿವಾಲಯ ತಿಳಿಸಿದೆ ಎಂದಿದ್ದಾರೆ.

ಮಾತ್ರವಲ್ಲದೆ ಈ ಗಮನಾರ್ಹ ಸಾಧನೆಗಾಗಿ ಕೇಂದ್ರ ಕೃಷಿ ಸಚಿವಾಲಯ ಆ.26 ಮತ್ತು 27ರಂದು ಉತ್ತರಾಖಂಡದಲ್ಲಿ ಆಯೋಜಿಸಿರು ಕೃಷಿ ಪರಿಶೀಲನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ನಾಮ ನಿರ್ದೇಶನ ಮಾಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಅಚಲವಾಗಿ ಬದ್ದತೆಯಿಂದ ರೈತರ ಕ್ಷೇಮಾಭಿವೃದ್ಧಿಗೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಇದಕ್ಕಾಗಿ ಡಿಸಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜತೆಗೆ ಮುಂದೆಯೂ ಇದೇ ರೀತಿ ಸಾಧನೆ ಮಾಡುವಂತೆ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net