

ಕರೊನಾ ಸೋಂಕು ನಮ್ಮ ಬಳಿ ಸುಳಿಯಬಾರದು ಎಂದರೆ ಮೊದಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುತ್ತಿದೆ ವೈದ್ಯಲೋಕ. ಈ ನಿಟ್ಟಿನಲ್ಲಿ ಇಡೀ ಜಗತ್ತೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೂ ಹಲವರು ನಿಯಮ ಉಲ್ಲಂಘಿಸಿ ಆತಂಕ ಸೃಷ್ಟಿಸುತ್ತಿದ್ದಾರೆ. ಇಂತಹವರ ನಡುವೆಯೂ ಬೈಕ್ನಲ್ಲಿ ಹಾಲು ಮಾರುವ ರೈತನೊಬ್ಬ ಅಂತರದ ಪಾಠ ಕಲಿಕೆಗೆ ಮಾದರಿ ಎನಿಸಿದ್ದಾನೆ. ಈತನ ಫೋಟೋವನ್ನು ಖುದ್ದು ಐಎಎಸ್ ಅಧಿಕಾರಿಯೊಬ್ಬರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ರೈತನ ಸೃಜನಶೀಲತೆ ಕಂಡು ಅಧಿಕಾರಿಗಳಾದಿಯಾಗಿ, ನೆಟ್ಟಿಗರೂ ಬೆರಗಾಗಿದ್ದಾರೆ.
ರಾಸುಗಳಿಂದ ನಿತ್ಯ ಹಾಲು ಕರೆದು ಬೈಕ್ನಲ್ಲಿ ಮಾರಾಟ ಮಾಡುತ್ತಿರುವ ರೈತ ಮೂರ್ನಾಲ್ಕು ಅಡಿ ದೂರದಲ್ಲೇ ಗ್ರಾಹಕರ ಪಾತ್ರೆಗೆ ಹಾಲು ಸೇರುವಂತೆ ತಂತ್ರ ಕಂಡುಕೊಂಡಿದ್ದಾನೆ. ಬೈಕ್ನ ಎರಡೂ ಬದಿ ಒಟ್ಟು 4 ಹಾಲಿನ ಕ್ಯಾನ್ಗಳಿದ್ದು, ಹಿಂಬದಿ ಸೀಟಿನ ಮೇಲೆ ಮೂರ್ನಾಲ್ಕು ಅಡಿ ಉದ್ದದ ಪೈಪ್ ಹಿಮ್ಮುಖವಾಗಿದೆ. ರೈತನು ಹಾಲು ಅಳೆದು ಕೊಳವೆಗೆ ಸುರಿಯುತ್ತಿದ್ದಂತೆ ಪೈಪ್ ಮೂಲಕ ಗ್ರಾಹಕರ ಪಾತ್ರೆ ಸೇರುತ್ತದೆ. ಹಾಲು ಬೇಕಿದ್ದವರು ಈ ಪೈಪ್ನ ತುದಿಯಲ್ಲಿ ಪಾತ್ರೆ ಹಿಡಿದು ನಿಲ್ಲಲೇಬೇಕು. ಇದು ಈ ರೈತನ ರೂಲ್ಸ್.
ಬಹುತೇಕ ಅಂಗಡಿ ಮಾಲೀಕರು- ಗ್ರಾಹಕರು ಪೊಲೀಸರಿಗಾಗಿ ಅಂತರ ಎಂಬಂತೆ ವರ್ತಿಸುವುದನ್ನೂ ಕಂಡಿದ್ದೇವೆ. ಇಂತಹವರ ನಡುವೆ ವಿಭಿನ್ನವಾಗಿ ನಿಲ್ಲುವ ಈ ರೈತ ಕೈಗವಸು, ಮಾಸ್ಕ್, ಎಲ್ಮೆಟ್ ಧರಿಸಿಯೇ ಹಾಲು ಮಾರಲು ಬೈಕ್ ಏರೋದು. ಈತನ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್, "ಭಾರತದ ಜುಗಾಡ್" ಎಂದು ಟ್ಯಾಗ್ಲೈನ್ ಕೊಟ್ಟಿದ್ದಾರೆ. ಸೃಜನಶೀಲತೆ ಇದಲ್ಲಿ ಕನಿಷ್ಠ ಸೌಲಭ್ಯದಲ್ಲೇ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈತನೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜುಗಾಡ್ನ ಫೋಟೋವನ್ನು ಇತರ ಐಎಎಸ್ ಅಧಿಕಾರಿಗಳೂ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಅಂತರ ಕಾಪಾಡಲು ಇಚ್ಛಾಶಕ್ತಿ ಇರಬೇಕು. ಹಾಲು ಮಾರುವ ವ್ಯಕ್ತಿಯನ್ನು ನೋಡಿ ಇತರರು ಕಲಿಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.