ಮಿಲನಾ ರೆಡಿ ಫಾರ್ ರಿಜಿಸ್ಟ್ರೇಶನ್

Milana
Published on

ಬೆಂಗಳೂರು: ಹೆಸರೇ ಚಿತ್ರದ ಮೊದಲ ಇನ್ವಿಟೇಶನ್ ಎಂಬ ಮಾತು ಚಿತ್ರರಂಗದಲ್ಲಿದೆ. ಹೆಸರು ವಿಭಿನ್ನವಾಗಿದ್ದರೆ, ಜನ ಕುತೂಹಲ ದಿಂದ ಚಿತ್ರ ನೋಡುತ್ತಾರೆ ಎಂಬ ಕಾರಣಕ್ಕೆ, ಮೊದಲು ವಿಭಿನ್ನ ಟೈಟಲ್​ಗಳಿಗೆ ಮಣೆ ಹಾಕಲಾಗುತ್ತದೆ. ಈಗ ಅಂಥದ್ದೇ ಒಂದು ಹೆಸರು ನಟಿ ಮಿಲನಾ ಅವರನ್ನು ಸೆಳೆದಿದೆ. ಹೆಸರು ಮತ್ತು ಕಥೆ ಇಷ್ಟವಾಗುತ್ತಿದ್ದಂತೆಯೇ, ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗೆ, ಅವರನ್ನು ಸೆಳೆದ ಟೈಟಲ್ ಯಾವುದು ಗೊತ್ತಾ? ‘ಫಾರ್ ರಿಜಿಸ್ಟ್ರೇಶನ್’.

‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್, ‘ಫಾರ್ ರಿಜಿಸ್ಟ್ರೇಶನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಆ ಚಿತ್ರಕ್ಕೆ ಈಗ ಮಿಲನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಮಿಲನಾ, ‘ಲಾಕ್​ಡೌನ್ ಸಮಯದಲ್ಲಿ 15-20 ಕಥೆಗಳನ್ನು ಕೇಳಿದ್ದೆ. ಅಷ್ಟಾಗಿ ಯಾವುದೂ ಇಷ್ಟವಾಗಿರಲಿಲ್ಲ. ಈ ಸಂದರ್ಭದಲ್ಲಿ ನಿರ್ದೇಶಕ ನವೀನ್ ಕಥೆ ಹೇಳಿದರು. ಮೊದಲಿಗೆ ಶೀರ್ಷಿಕೆ ಬಹಳ ಇಷ್ಟವಾಯ್ತು. ಆ ನಂತರ ಕಥೆ ಕೇಳಿದೆ. ಬಹಳ ಚೆನ್ನಾಗಿ ಕಥೆ ಮಾಡಿಟ್ಟುಕೊಂಡಿದ್ದಾರೆ. ಇವತ್ತಿನ ಜನರೇಶನ್​ಗೆ ಸಂಬಂಧಿಸಿದ ಕಥೆ ಅದು. ನಾಯಕ-ನಾಯಕಿ ಮತ್ತು ಅವರ ತಂದೆ-ತಾಯಿ ನಡುವೆ ನಡೆಯುವ ಮತ್ತು ಇಬ್ಬರಿಗೂ ರಿಲೇಟ್ ಆಗುವಂತಹ ಕಥೆ ಅದು. ಹಾಗಾಗಿ ತಕ್ಷಣವೇ ಒಪ್ಪಿಕೊಂಡೆ. ಸದ್ಯದಲ್ಲೇ ಚಿತ್ರಕ್ಕೆ ತಯಾರಿ ಶುರುವಾಗಲಿದೆ’ ಎನ್ನತ್ತಾರೆ. ಮಿಲನಾ ಅಭಿನಯದ ‘ಲವ್ ಮಾಕ್​ಟೇಲ್’ ಚಿತ್ರವು ಅಕ್ಟೋಬರ್ 16ರಂದು ಮರುಬಿಡುಗಡೆ ಆಗಲಿದೆ. ಇನ್ನೊಂದು ಕಡೆ, ‘ಲವ್ ಮಾಕ್​ಟೇಲ್-2’ನ ಚಿತ್ರೀಕರಣ ಅರ್ಧ ಮುಗಿದಿದ್ದು, ಡಬ್ಬಿಂಗ್ ಕೆಲಸಗಳು ಪ್ರಾರಂಭವಾಗಿವೆ. ಡಿಸೆಂಬರ್​ನಲ್ಲಿ ‘ಫಾರ್ ರಿಜಿಸ್ಟ್ರೇಶನ್’ ಚಿತ್ರೀಕರಣ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net