ಅಮೆರಿಕದ ಟಿ20 ಕ್ರಿಕೆಟ್​ ಟೂರ್ನಿ ಮೇಜರ್​ ಲೀಗ್​ ಕ್ರಿಕೆಟ್​ನಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ ಎಂಐ ನ್ಯೂಯಾರ್ಕ್​

mlc mi web
Published on

ನ್ಯೂಯಾರ್ಕ್​: ನಾಯಕ ನಿಕೋಲಸ್ ಪೂರನ್​ (137*ರನ್​, 55 ಎಸೆತ, 10 ಬೌಂಡರಿ, 13 ಸಿಕ್ಸರ್) ಸ್ಫೋಟಕ ಶತಕದ ನೆರವಿನಿಂದ ಎಂಐ ನ್ಯೂಯಾರ್ಕ್​ ತಂಡ ಮೇಜರ್ ಲೀಗ್ ಕ್ರಿಕೆಟ್ (ಎಂಎಸ್​ಸಿ) ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಭಾನುವಾರ (ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ) ಫೈನಲ್‌ ಪಂದ್ಯದಲ್ಲಿ ನೀಲಿ ಮತ್ತು ಚಿನ್ನದ ಬಣ್ಣದ ಜೆರ್ಸಿ ತೊಟ್ಟ ಎಂಐ ನ್ಯೂಯಾರ್ಕ್​ ತಂಡ ಸಿಯಾಟಲ್​ ಓರ್ಕಾಸ್​ ತಂಡವನ್ನು 7 ವಿಕೆಟ್​ಗಳಿಂದ ಪರಾಭವಗೊಳಿಸಿ ಚೊಚ್ಚಲ ಆವೃತ್ತಿಯ ಪ್ರಶಸ್ತಿ ಎತ್ತಿ ಹಿಡಿಯಿತು.

ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಯಾಟಲ್​ ಓರ್ಕಾಸ್​ ತಂಡ 20 ಓವರ್​ಗಳಲ್ಲಿ 9 ವಿಕೆಟ್​ಗೆ 183 ರನ್​ ಪೇರಿಸಿತು. ವಿಕೆಟ್​ ಕೀಪರ್​-ಆರಂಭಿಕ ಕ್ವಿಂಟನ್​ ಡಿಕಾಕ್​ 87 ರನ್​ ಸಿಡಿಸಿ (52 ಎಸೆತ, 9 ಬೌಂಡರಿ, 4 ಸಿಕ್ಸರ್) ಉತ್ತಮ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಪೂರನ್​ ನಾಯಕನಾಟದ ಬಲದಿಂದ ಎಂಐ ನ್ಯೂಯಾರ್ಕ್​ ತಂಡ 16 ಓವರ್​ಗಳಲ್ಲೇ 3 ವಿಕೆಟ್​ಗೆ 184 ರನ್​ ಪೇರಿಸಿ ಜಯಿಸಿತು.

ಮೇಜರ್ ಲೀಗ್ ಕ್ರಿಕೆಟ್ ಅಮೆರಿಕದ ಟಿ20 ಕ್ರಿಕೆಟ್ ಲೀಗ್ ಆಗಿದ್ದು, ಕಳೆದ ಜುಲೈ 13ರಂದು ಉದ್ಘಾಟನಾ ಆವೃತ್ತಿ ಆರಂಭಗೊಂಡಿತ್ತು. ಎಂಐ ನ್ಯೂಯಾರ್ಕ್​ ತಂಡದ ಮಾಲೀಕರಾದ ನೀತಾ ಎಂ. ಅಂಬಾನಿ ಎಂದಿನಂತೆ ಉತ್ಸಾಹದಿಂದ ತಂಡದ ಜತೆಗಿದ್ದು ಪ್ರೋತ್ಸಾಹ ತುಂಬಿದರು. ವಿಜಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ ನೀತಾ ಎಂ. ಅಂಬಾನಿ, ಫೈನಲ್‌ನ ವಾತಾವರಣವನ್ನು 'ನಂಬಲಾಗದ ಮತ್ತು ನಿಜವಾಗಿಯೂ ರೋಮಾಂಚನಕಾರಿ' ಎಂದು ವಿವರಿಸಿದರು ವಿಶ್ವದ ಕೆಲವು ಅತ್ಯುತ್ತಮ ಆಟಗಾರರ ಆಟವನ್ನು ಒಳಗೊಂಡ ಟೂರ್ನಿಯ ಪ್ರಭಾವವನ್ನು ಶ್ಲಾಘಿಸಿದ ಅವರು, 'ಕ್ರಿಕೆಟ್‌ ಹಬ್ಬದಂಥ ವಾತಾವರಣ ಟೂರ್ನಿಯ ವೇಳೆ ಕಂಡುಬಂತು. ಈ ಪ್ರದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಯ ನಿಟ್ಟಿನಲ್ಲಿ ಎಂಎಲ್​ಸಿ ಟೂರ್ನಿ ಒಂದು ಮಹತ್ವದ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಕ್ರೀಡೆಯು ಸಮಾಜದ ತಳಹದಿಯಾಗಿರಬಹುದು ಮತ್ತು ವಿಶೇಷವಾಗಿ ಅಮೆರಿಕದಲ್ಲಿ ಇದು ಸಂಸ್ಕೃತಿಯ ದೊಡ್ಡ ಭಾಗವಾಗಿದೆ. ಆದ್ದರಿಂದ, ನಾವು ಎಂಎಲ್‌ಸಿಯೊಂದಿಗೆ ಕೈಜೋಡಿಸುವುದು ಮತ್ತು ಈ ಪ್ರದೇಶದಲ್ಲಿ ಕ್ರಿಕೆಟ್‌ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುವುದು ಅದ್ಭುತವಾಗಿದೆ. ನಾನು ಇದರ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದೇನೆ' ಎಂದು ಹೇಳಿದರು.

ಈಗ ಎರಡು ಲಿಂಗಗಳು, ಮೂರು ಖಂಡಗಳು, ನಾಲ್ಕು ದೇಶಗಳು ಮತ್ತು ಐದು ಲೀಗ್‌ಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ನಿಜವಾದ ಜಾಗತಿಕ ಫ್ರಾಂಚೈಸಿ ಆಗಿದೆ. ಇದರ ಹಿಂದಿನ ದೂರದೃಷ್ಟಿಯ ಬಗ್ಗೆ ಮಾತನಾಡಿದ ನೀತಾ ಎಂ. ಅಂಬಾನಿ, 'ವಿಶ್ವದಾದ್ಯಂತ ಕ್ರಿಕೆಟ್ ಬೆಳವಣಿಗೆಯನ್ನು ನೋಡುವುದು ಅದ್ಭುತವಾಗಿದೆ ಮತ್ತು ವಿಶೇಷವಾಗಿ ಎಂಐ ತಂಡವು ಯುಎಇ, ದಕ್ಷಿಣ ಆಫ್ರಿಕಾ ಬಳಿಕ ಈಗ ಅಮೆರಿಕಕ್ಕೆ ಹೋಗಿದೆ. ನಮ್ಮಲ್ಲಿ ಮಹಿಳಾ ತಂಡವೂ ಇದೆ ಮತ್ತು ಈ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ವೈವಿಧ್ಯಮಯ ಹಿನ್ನೆಲೆಯಿಂದ ಬಂದ ಈ ಯುವತಿಯರು ತಂಡವಾಗಿ ಒಟ್ಟಿಗೆ ಬಂದು ಆಡುವುದನ್ನು ನೋಡುವುದು ತುಂಬಾ ಅದ್ಭುತವಾಗಿತ್ತು. ಇದು ತುಂಬಾ ಹೃದಯವನ್ನು ಗೆದ್ದುಕೊಂಡಿತ್ತು' ಎಂದು ಹೇಳಿದರು.

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌(ಡಬ್ಲ್ಯುಪಿಎಲ್​) ಟೂರ್ನಿಯು ಗೇಮ್​ ಚೇಂಜರ್​ ಆಗಲಿದೆ ಎಂದು ನೀತಾ ಎಂ. ಅಂಬಾನಿ ಆಶಿಸಿದರು. 'ನಾನು ಕ್ರೀಡೆಯಲ್ಲಿ ಹುಡುಗಿಯರು ತೊಡಗಿಸಿಕೊಳ್ಳುವುದರ ದೊಡ್ಡ ಬೆಂಬಲಿಗಳಾಗಿದ್ದೇನೆ ಮತ್ತು ಬಹುತೇಕ ಪ್ರತಿಯೊಂದು ಕ್ರೀಡೆಯಲ್ಲೂ ನಾವು ಅದನ್ನು ಸಾಧ್ಯವಾಗಿಸಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು. ನೀತಾ ಎಂ. ಅಂಬಾನಿ ಅವರು ಎಂಐನ ಅನನ್ಯ 'ಒಂದು ಕುಟುಂಬ' (#OneFamily) ಎಂಬ ಪರಿಕಲ್ಪನೆ ಮತ್ತು ಅದು ಏನನ್ನು ಸೂಚಿಸುತ್ತದೆ ಎಂಬುದರ ಕುರಿತು ಮಾತನಾಡಿದರು. 'ನಾವು ಎಂಐ ತಂಡವನ್ನು ಒಂದು ಕುಟುಂಬ ಎಂದು ನಾವು ನಂಬುತ್ತೇವೆ ಮತ್ತು ಅದು ನಮ್ಮ ನೀತಿಯಾಗಿದೆ. ಇದು ಕೇವಲ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಮಾತ್ರ ಒಳಗೊಂಡಿರುವುದಿಲ್ಲ. ಜತೆಗೆ ನಮ್ಮ ಅಭಿಮಾನಿಗಳೂ ಇದರಲ್ಲಿ ಸೇರಿದ್ದಾರೆ. ಅವರ ಕೊಡುಗೆಯಿಂದಾಗಿಯೇ ಇಂದು ಎಂಐ ತಂಡವನ್ನು ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸಲು ಸಾಧ್ಯವಾಗಿದೆ. ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಎಂಬುದು ನಮಗೆ ಪ್ರಮುಖ ಅಭಿಯಾನಗಳಲ್ಲಿ ಒಂದಾಗಿದೆ. ಈ ಅಭಿಯಾನವು ಹಿಂದುಳಿದ ಹಿನ್ನೆಲೆಯಿಂದ ಬಂದ ಭಾರತದ 22 ದಶಲಕ್ಷ ಮಕ್ಕಳನ್ನು ಬೆಂಬಲಿಸಿದೆ. ಹಾಗಾಗಿ ಅವರೆಲ್ಲರನ್ನೂ ಒಂದು ಕುಟುಂಬ ಮತ್ತು ಎಂಐ ಕುಟುಂಬ ಎಂದು ಕರೆಯಲು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ' ಎಂದರು.

ನೀತಾ ಎಂ. ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡವು ಹೇಗೆ ಹಲವು ವರ್ಷಗಳಿಂದ ಹೊಸ ಪ್ರತಿಭೆಗಳನ್ನು ಬೆಳೆಸುತ್ತಿದೆ ಎಂಬುದರ ಕುರಿತು ಮಾತನಾಡಿದರು. 'ಮುಂಬೈ ಇಂಡಿಯನ್ಸ್‌ ಮೂಲಕ ನಾವು ಯುವ ಪ್ರತಿಭೆಗಳನ್ನು ಶೋಧಿಸಲು ಮತ್ತು ಬೆಳೆಸಲು ಹೆಮ್ಮೆ ಪಡುತ್ತೇವೆ. ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್​ ಬುಮ್ರ ಅವರೂ ಇದರಲ್ಲಿ ಸೇರಿದ್ದಾರೆ. ಇದನ್ನು ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಮಾಡಬೇಕೆಂದು ನಾವು ಬಯಸುತ್ತೇವೆ' ಎಂದರು.

ಎಂಎಲ್​ಸಿ ಬಗ್ಗೆ: ಅಮೆರಿಕದ ಕ್ರಿಕೆಟ್​ ಮಂಡಳಿಯಿಂದ (ಯುಎಸ್​ಎ ಕ್ರಿಕೆಟ್​) ಮಾನ್ಯತೆ ಪಡೆದ ಅಮೆರಿಕದ ಟಿ20 ಲೀಗ್‌ ಆಗಿರುವ ಮೇಜರ್ ಲೀಗ್ ಕ್ರಿಕೆಟ್‌ (ಎಂಎಲ್​ಸಿ) ಉದ್ಘಾಟನಾ ಆವೃತ್ತಿಯ ಪಂದ್ಯಗಳನ್ನು ಎರಡು ಸ್ಥಳಗಳಲ್ಲಿ ಆಯೋಜಿಸಲಾಯಿತು. ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ಮೋರಿಸ್‌ವಿಲ್ಲೆಯ ಚರ್ಚ್ ಸ್ಟ್ರೀಟ್ ಪಾರ್ಕ್​ನಲ್ಲಿ ಜುಲೈ 13ರಿಂದ 30ರವರೆಗೆ ಟೂರ್ನಿ ನಡೆಯಿತು. ಮೊದಲ ಆವೃತ್ತಿಯು ಆರು ತಂಡಗಳನ್ನು ಒಳಗೊಂಡಿತ್ತು.

ಎಂಐ ನ್ಯೂಯಾರ್ಕ್ ಬಗ್ಗೆ: ಎಂಐ ನ್ಯೂಯಾರ್ಕ್ ತಂಡವು ಅಮೆರಿಕದ ರಾಜಧಾನಿ ನ್ಯೂಯಾರ್ಕ್ ನಗರದ ಫ್ರ್ಯಾಂಚೈಸಿಯಾಗಿದೆ. ಎಂಎಲ್​ಸಿ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದೆ. ಈ ತಂಡವು ಇಂಡಿಯಾವಿನ್ ಸ್ಪೋರ್ಟ್ಸ್ (ರಿಲಯನ್ಸ್ ಕಂಪನಿ) ಒಡೆತನದಲ್ಲಿದೆ ಮತ್ತು ಜಗತ್ತಿನಾದ್ಯಂತ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೊಂದಿರುವ ಐದು ತಂಡಗಳಲ್ಲಿ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net