

ತಿರುವನಂತಪುರಂ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಿಕ್ಕ 30 ಕೆ.ಜಿ. ತೂಕದ ಚಿನ್ನದ ಪ್ರಕರಣ ದಿನೇದಿನೆ ಕಗ್ಗಂಟಾಗುತ್ತಿದೆ.
ಪ್ರಕರಣವನ್ನು ಸಿಬಿಐನಂತಹ ಯಾವುದಾದರೂ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೇರಳದ ಕಾಂಗ್ರೆಸ್ ಒತ್ತಾಯಿಸಿದೆ.
ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಈ ಸ್ಮಗ್ಲಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಿದೆ.
ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಚಿನ್ನದ ಹಿಂದೆ ಮುಖ್ಯಮಂತ್ರಿ ಕಚೇರಿಯ ಕೈವಾಡವೂ ಇದೆ. ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಕೇರಳದಲ್ಲಿ ಪ್ರತಿಪಕ್ಷಗಳು ಆಗ್ರಹ ಮಾಡಿದ್ದವು. ಅದಾದ ಬಳಿಕ ಪಿಣರಾಯಿ ವಿಜಯನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಗಳಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಕರೊನಾ ಸೋಂಕಿನ ಬಗ್ಗೆ ಈಗ ಎಚ್ಚೆತ್ತುಕೊಂಡ ಪಾಕಿಸ್ತಾನ ಸರ್ಕಾರ; ಒಂದು ದಾಖಲೆಯನ್ನೂ ಮಾಡಿದೆ…
ಸಿಎಂ ಪತ್ರಕ್ಕೆ ಮಾನ್ಯತೆ ನೀಡಿ ಕೇರಳ ಸ್ಮಗ್ಲಿಂಗ್ ತನಿಖೆಯನ್ನು ಎನ್ಐಎಗೆ ವಹಿಸಲಾಗಿದೆ. ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದವಾರ ಏರ್ಪೋರ್ಟ್ನಲ್ಲಿ ರಾಜತಾಂತ್ರಿಕ ಬ್ಯಾಗೇಜ್ನಲ್ಲಿ 30 ಕೆಜಿ ಚಿನ್ನ ಪತ್ತೆಯಾಗಿತ್ತು. ಇದು ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ ಕಚೇರಿಗೆ ಸೇರಿದ್ದು ಎಂಬುದು ಗೊತ್ತಾಗಿತ್ತು. (ಏಜೆನ್ಸೀಸ್)