ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯಗೃಹರಕ್ಷಕರಿಗೆ ಕಾರ್ಯಗಾರ ಉದ್ಘಾಟಿಸಿ ಜಿಪಂ ಸಿಇಒ ಡಾ.ಆನಂದ್ ಅಭಿಮತ

mng--24 Aug Home guard Training
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ ಗುರುವಾರ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ನಡೆಯಿತು.


ಜಿಪಂ ಸಿಇಒ ಡಾ.ಆನಂದ್ ಕಾರ್ಯಾಗಾರ ಉದ್ಘಾಟಿಸಿದರು. ಸಾವಿರ ಸಂಖ್ಯೆಯಲ್ಲಿರುವ ಗೃಹರಕ್ಷಕರು ತಮ್ಮ ಆರೋಗ್ಯ ಸಮಸ್ಯೆಗಳು ಕಾಡಿದಾಗ ಸಕಾಲದಲ್ಲಿ ವೈದ್ಯರ ಬಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜತೆಗೆ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ಗೃಹರಕ್ಷಕರು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಸಹಜವಾಗಿ ಕೆಲಸದ ಒತ್ತಡ ಅಥವಾ ವೈಯಕ್ತಿಕ ಜೀವನದ ಒತ್ತಡ ಇರಬಹುದು. ಇದನ್ನು ನಿರ್ವಹಣೆ ಮಾಡುವ ಜೊತೆಗೆ ಇದರೊಂದಿಗೆ ಬರುವ ಕಾಯಿಲೆಗಳಾದ ಮದುಮೇಹ, ರಕ್ತದೊತ್ತಡ, ಮಾನಸಿಕ ಖಿನ್ನತೆ ಇವೆಲ್ಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.


ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮನೋರೋಗ ತಜ್ಞರಾದ ಡಾ.ಸುಪ್ರಿತಾ ಅವರು ಮಾನಸಿಕ ಆರೋಗ್ಯದ ಬಗ್ಗೆ ತರಬೆತಿ ನೀಡಿದರು. ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ರಾಹುಲ್ ರಾವ್ ಅವರು ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ತರಬೇತಿ ನೀಡಿದರು ಹಾಗೂ ಮನಶಾಂತಿ ಚಿಕಿತ್ಸಾಲಯದ ಮಾನಸಿಕ ಆರೋಗ್ಯದ ವೈದ್ಯರಾದ ಡಾ.ರಮೀಳಾ ಶೇಖರ್ ಅವರು ಒತ್ತಡ ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು.


ಈ ಕಾರ್ಯಕ್ರಮದಲ್ಲಿ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್, ಜಿಲ್ಲಾ ಲೆಪ್ರಸಿ ಅಧಿಕಾರಿ ಡಾ. ಸುದರ್ಶನ್ ಸಿ.ಎಂ. ಉಪಸ್ಥಿತರಿದ್ದರು.
ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಸ್ವಾಗತಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಭಂಡಾರಿ ಕಾರ್ಯಗಾರದ ಉಸ್ತುವಾರಿ ವಹಿಸಿದ್ದರು. ಜಿಲ್ಲಾ ಉಪ ಸಮಾದೇಷ್ಟ ರಮೇಶ್ ವಂದಿಸಿದರು. ಮಂಗಳಾ ಪ್ಯಾರಾ ಮೆಡಿಕಲ್ ಕಾಲೇಜು ಸಿಬ್ಬಂದಿ ಗಳು ಕಣ್ಣು ಪರೀಕ್ಷೆ ನಡೆಸಿಕೊಟ್ಟರು. 10 ಮಂದಿ ಸರ್ಕಾರಿ ಶುಶ್ರೂಷಕಿಯರು ಈ ತರಬೇತಿಯಲ್ಲಿ ಉಪಸ್ಥಿತರಿದ್ದರು ಹಾಗೂ ಗೃಹರಕ್ಷಕರಿಗೆ ಉಚಿತ ಮಧುಮೇಹ, ರಕ್ತದೊತ್ತಡ, ಕಣ್ಣಿನ ತಪಾಸಣೆಗಳನ್ನು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net