ಮಾನಸಿಕ ಆರೋಗ್ಯ ಮಾನವ ಹಕ್ಕಿನ ಅಂಶವೂ ಹೌದು

10blrp2
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆ ಆವರಣ ಜಾಗೃತಿ ಜಾಥಾಗೆ ಎ.ಎಸ್.ಸಲ್ಮಾ ಚಾಲನೆ ನೀಡಿದರು. ತನ್ವೀರ್ ಅಹಮದ್, ಪುಟ್ಟಸ್ವಾಮಿಗೌಡ, ಉದಯಕುಮಾರ್ ಇತರರಿದ್ದರು.
Published on

 ಬೇಲೂರು : ತಾಲೂಕು ಆಡಳಿತ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ನಿಮಾನ್ಸ್‌ನ(ಓಂಒಂಓ) ನಮನ ಎಎಚ್‌ಟಿ ತಂಡದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣ ಶುಕ್ರವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಜಾಗೃತಿ ಜಾಥಾಕ್ಕೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎ.ಎಸ್.ಸಲ್ಮಾ ಚಾಲನೆ ನೀಡಿದರು. ಬಳಿಕ ಮಾನಸಿಕ ಆರೋಗ್ಯವು ಕೇವಲ ವೈದ್ಯಕೀಯ ವಿಷಯವಲ್ಲ, ಅದು ಮಾನವ ಹಕ್ಕಿನ ಅಂಶವೂ ಹೌದು. ಮನೋಬಲ ಕಳೆದು ಕೊಂಡವರು ಸಮಾಜದ ಬೆಂಬಲದಿಂದ ಮತ್ತೆ ಜೀವನದಲ್ಲಿ ನಿಲ್ಲಬಹುದು. ಇಂತಹ ಕಾರ್ಯಕ್ರಮಗಳು ಜನರಲ್ಲಿ ಸಹಾನುಭೂತಿ ಮತ್ತು ಅರಿವು ಹೆಚ್ಚಿಸುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯ. ತುರ್ತು ಪರಿಸ್ಥಿತಿಗಳಲ್ಲಿ ಜನರು ಆತಂಕ, ಭಯದಿಂದ ಬಳಲಬಾರದು. ತಮ್ಮಲ್ಲಿರುವ ಮನೋಬಲ ಕಾಪಾಡಿಕೊಳ್ಳಲು ಹಾಗೂ ಸಲಹೆ ಪಡೆಯಲು ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಯಲಕ್ಷ್ಮೀ ಮಾತನಾಡಿ, ಮಾನಸಿಕ ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿರಿಯರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಧೈರ್ಯವಿರಬೇಕು. ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಸಹಾನುಭೂತಿ ಮತ್ತು ಅರಿವು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

ನಿಮಾನ್ಸ್‌ನ ನಮನ ತಂಡದ ಮನೋ ವೈದ್ಯಾಧಿಕಾರಿ ಡಾ.ಸುಮನಾ ಮಾತನಾಡಿ, ಪ್ರತಿಯೊಬ್ಬರ ಇಂದಿನ ಜೀವನದಲ್ಲಿ ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಸಮಯೋಚಿತ ಸಮಾಲೋಚನೆ ಮತ್ತು ಸಹಾಯ ಸೇವೆಗಳಿಂದ ಆತ್ಮಹತ್ಯೆ, ಮುಂತಾದ ಸಮಸ್ಯೆಗಳನ್ನು ತಡೆಯಬಹುದು. ಪ್ರತಿಯೊಬ್ಬರೂ ತಮ್ಮ ಮತ್ತು ಇತರರ ಮನೋಸ್ಥಿತಿಯ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.

ಇದಕ್ಕೂ ಮುನ್ನ ಈ ವರ್ಷದ ಘೋಷಣೆಯಾದ ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಲಭ್ಯತೆ ಘೋಷಣೆಯೊಂದಿಗೆ ನಡೆದ ಜಾಥಾ ಬಸವೇಶ್ವರ ವೃತ್ತದವರೆಗೆ ಸಾಗಿ ಜನರಲ್ಲಿ ಅರಿವು ಮೂಡಿಸಿತು.

ಕಂದಾಯ ಇಲಾಖೆಯ ಶಿರಸ್ತೇದಾರ್ ತನ್ವೀರ್ ಅಹಮದ್, ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಬಿಇಒ ಉದಯಕುಮಾರ್, ಮನೋ ವೈದ್ಯರಾದ ಡಾ.ಕೃತಿಕಾ, ಡಾ.ಕೃತಿಕಾ, ಪಲ್ಲವಿ, ಮನೋಜ್, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ನಿರೀಕ್ಷಕ ದಯಾನಂದ್, ನಮನ ತಂಡದ ಮನೋ ಶಾಸ್ತ್ರಜ್ಞರು, ಸಮುದಾಯ ಆರೋಗ್ಯ ಕಾರ್ಯಕರ್ತರು, ವಂದನಾ ಆಶಾ ಮೇಲ್ವಿಚಾರಕರು, ಆಶಾ ಕಾರ್ಯಕರ್ತರು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net