ಹೆಚ್ಚುವರಿ ಪಿಂಚಣಿ ಅನುಷ್ಠಾನ ವಿಳಂಬ ಸಮಸ್ಯೆಗೆ ಸ್ಪಂದಿಸುವಂತೆ ಕ್ಯಾ.ಚೌಟ ಮನವಿ

mng-24sep-capt chouta
Published on


ಮಂಗಳೂರು : ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿಗಳ ಹೆಚ್ಚುವರಿ ಪಿಂಚಣಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಗೆ ತುರ್ತು ಸ್ಪಂದಿಸುವಂತೆ ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದಾರೆ.ನವದೆಹಲಿಯಲ್ಲಿ ಮಂಗಳವಾರ ಸಚಿವರನ್ನು ಭೇಟಿಯಾದ ಸಂಸದರು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು.
2014ರ ಸೆ.1ರ ನಂತರ 58 ವರ್ಷ ಪೂರ್ಣಗೊಳಿಸಿ ನಂತರ ನಿವೃತ್ತರಾದ ವಿನಾಯಿತಿ ಮತ್ತು ವಿನಾಯಿತಿ ಇಲ್ಲದ ಸಂಸ್ಥೆಗಳ ನೌಕರರು ಕೂಡ ಇತರ ನೌಕರರಂತೆ ಹೆಚ್ಚುವರಿ ಪಿಂಚಣಿ ಪಡೆಯುವುದಕ್ಕೆ ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಈ ಸಂಬಂಧ ಈಗಾಗಲೇ ಅರ್ಜಿ ಸಲ್ಲಿಸಿರುವ ನಿವೃತ್ತ ಕೆಎಸ್‌ಆರ್‌ಟಿಸಿ ಉದ್ಯೋಗಿಗಳಿಗೆ ಹೆಚ್ಚುವರಿ ಪಿಂಚಣಿ ನೀಡುವ ಅನುಷ್ಠಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದ ಸಂಸ್ಥೆಯ ನಿವೃತ್ತ ಉದ್ಯೋಗಿಗಳು ಪಿಂಚಣಿ ಕೊಡುಗೆ ಮೊತ್ತದಲ್ಲಿನ ವ್ಯತ್ಯಾಸದ ಮೇಲೆ ಬಡ್ಡಿ ಪಾವತಿಸುವ ಮೂಲಕ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ. ದ.ಕ.ಕ್ಷೇತ್ರವೊಂದರಲ್ಲೇ ಸುಮಾರು 600ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದೆಲ್ಲೆಡೆ ಬೇರೆ ಸರ್ಕಾರಿ ಸ್ವಾಮ್ಯದಲ್ಲಿನ ಅಸಂಖ್ಯ ನಿವೃತ್ತ ನೌಕರರು ಕೂಡ ಈ ಹೆಚ್ಚುವರಿ ಪಿಂಚಣಿ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಸದರು ತಿಳಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಮಂಜೂರು ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರ ಭವಿಷ್ಯ ನಿಧಿ ಆಯುಕ್ತರಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಸಂಸದರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net