More

    ಕರಗುತ್ತಿದೆ ಐಸ್‌ಕ್ರೀಂ ಉದ್ಯಮ

     

    ಮಂಗಳೂರು: 20 ವರ್ಷಗಳಲ್ಲಿ ಮೊದಲ ಬಾರಿಗೆ ಐಸ್‌ಕ್ರೀಂ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಇಡೀ ಉದ್ಯಮವೇ ಕರಗಿ ನೀರಾಗುವ ಸ್ಥಿತಿಗೆ ಬಂದಿದೆ.

    ಐಸ್‌ಕ್ರೀಂ ತಯಾರಿಯಲ್ಲಿ ಪ್ರಮುಖವಾಗಿರುವ ಕೆನೆ ರಹಿತ ಹಾಲಿನ ಪುಡಿಯ (ಸ್ಕಿಮ್ಡ್ ಮಿಲ್ಕ್ ಪೌಡರ್) ದರ ಏರಿಕೆ ಮತ್ತು ಲಭ್ಯ ತಾ ಪ್ರಮಾಣ ಕಡಿಮೆಯಾಗಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ. ಹೊರದೇಶದಿಂದ ಆಮದು ಮಾಡಲು ಶೇ.60ರಷ್ಟು ತೆರಿಗೆ, ಐಸ್‌ಕ್ರೀಂ ಮೇಲೆ ಶೇ.18 ಜಿಎಸ್‌ಟಿ ಇವೆಲ್ಲದರಿಂದ ಉದ್ಯಮದ ಮಾಲೀಕರು ಹೈರಾಣಾಗಿ ಹೋಗಿದ್ದಾರೆ.

    ದೇಶದಲ್ಲಿ ಬೃಹತ್ ಮತ್ತು ಸಣ್ಣ ಪ್ರಮಾಣದ ಘಟಕಗಳು ಸೇರಿ ಒಟ್ಟು ಸುಮಾರು 7000ಕ್ಕೂ ಅಧಿಕ ಐಸ್‌ಕ್ರೀಂ ಬ್ರಾಂಡ್‌ಗಳಿವೆ. ಇವುಗಳ ವಾರ್ಷಿಕ ವಹಿವಾಟು 15 ಸಾವಿರ ಕೋಟಿ ರೂಪಾಯಿ. ಈ ಉದ್ಯಮ ಪ್ರತಿ ವರ್ಷದ ಶೇ.15ರಿಂದ 16ರಷ್ಟು ಬೆಳವಣಿಗೆ ಹಂತದಲ್ಲಿತ್ತು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೇಶದಲ್ಲಿ 25 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿದೆ. ಆದರೆ ಈಗ ದೇಶದಲ್ಲಿ ಶೇ.10ರಷ್ಟು ಸಂಸ್ಥೆಗಳ ಪರಿಸ್ಥಿತಿ ಶೋಚನೀಯ ಹಂತಕ್ಕೆ ತಲುಪಿವೆ.

    ಐಸ್‌ಕ್ರೀಂ ತಯಾರಿಕೆಗೆ ಪ್ರತಿ ವರ್ಷ 1ಲಕ್ಷ ಮೆಟ್ರಿಕ್ ಟನ್ ಸ್ಕಿಮ್ಡ್ ಮಿಲ್ಕ್ ಪೌಡರ್(ಎಸ್‌ಎಂಪಿ) ಅವಶ್ಯಕತೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಭ್ಯತೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಮುಲ್‌ನಲ್ಲಿ ಕಳೆದ ವರ್ಷ 1.20 ಲಕ್ಷ ಮೆಟ್ರಿಕ್ ಟನ್ ಇದ್ದ ಸಂಗ್ರಹ ಇಂದು 60 ಸಾವಿರ ಮೆಟ್ರಿಕ್ ಟನ್ ಇಳಿದಿದೆ. ಕೆಎಂಎಫ್‌ನಲ್ಲಿ 14 ಸಾವಿರ ಮೆಟ್ರಿಕ್ ಟನ್‌ನಿಂದ 2,200 ಮೆಟ್ರಿಕ್ ಟನ್‌ಗೆ ಕುಸಿದಿದೆ. ಕಳೆದ ಮೂರು ತಿಂಗಳಲ್ಲಿ ಹಾಲು ಉತ್ಪಾದನೆ ಶೇ.15-20ರಷ್ಟು ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲಿ ಎಸ್‌ಎಂಪಿ ಖರೀದಿಯೇ ಐಸ್‌ಕ್ರೀಂ ಸಂಸ್ಥೆಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ಎಸ್‌ಎಂಪಿ ದರ ಹೆಚ್ಚಳ: ಕಳೆದ ವರ್ಷದ ಸ್ಕಿಮ್ಡ್ ಮಿಲ್ಕ್ ಪೌಡರ್ ಸರಾಸರಿ ದರ ಪ್ರತಿ ಕೆ.ಜಿ.ಗೆ 150 ರೂ. ಇತ್ತು. ಹಿಂದಿನ ನಾಲ್ಕೈದು ವರ್ಷಗಳ ಸರಾಸರಿ ದರ ಪ್ರತಿ ಕೆ.ಜಿಗೆ 180ರಿಂದ 200ರೂ. ಆದರೆ 2019-ಜನವರಿಯಿಂದ ಪ್ರತಿ ದಿನ ದರ ಹೆಚ್ಚುತ್ತಲೇ ಹೋಗಿದ್ದು, ಪ್ರಸ್ತುತ ದರ ಕೆ.ಜಿ.ಗೆ 330 ರೂ. ತಲುಪಿದೆ. ಇಷ್ಟು ಹಣ ನೀಡಿದರೂ, ಬೇಡಿಕೆಯಷ್ಟು ಎಸ್‌ಎಂಪಿ ಲಭ್ಯವಿಲ್ಲ. ಗರಿಷ್ಠ ಪ್ರಮಾಣದಲ್ಲಿ ಪೂರೈಕೆಯಾಗಬೇಕಾದ ಈ ಋತುವಿನಲ್ಲೇ ಹೀಗಾದರೆ ಬೇಸಿಗೆಯಲ್ಲಿ ಪ್ರಮಾಣ ಎಷ್ಟಿರಬಹುದು ಎನ್ನುವುದು ಭಾರತೀಯ ಐಸ್‌ಕ್ರೀಂ ತಯಾರಕರ ಅಸೋಸಿಯೇಶನ್ (ಐಐಸಿಎಂಎ) ಎದುರಿಗಿರುವ ಪ್ರಶ್ನೆ.

    ಕೇಂದ್ರ ಸಚಿವರ ಭೇಟಿ: ಐಐಸಿಎಂಎ ನಿಯೋಗ ಡಿ.26ರಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಮನವರಿಕೆ ಮಾಡಿದೆ. ಸಚಿವರು ಧನಾತ್ಮಕ ಸ್ಪಂದಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಜತೆಗೆ ವಿತ್ತ ಸಚಿವಾಲಯ, ವಾಣಿಜ್ಯ ಸಚಿವಾಲಯವೂ ಪೂರಕ ವ್ಯವಸ್ಥೆ ಮಾಡಿ ಸಮಸ್ಯೆಯಿಂದ ಪಾರಾಗಲು ನೆರವಾಗಬೇಕು ಎಂದು ಐಐಸಿಎಂಎ ಆಗ್ರಹಿಸಿದೆ.

    ಐಐಸಿಎಂಎ ಬೇಡಿಕೆಯೇನು?: ಕಳೆದ ವರ್ಷ ಎಸ್‌ಎಂಪಿ ಬೆಲೆ ಕಡಿಮೆಯಿದ್ದಾಗ ಕೇಂದ್ರ ಸರ್ಕಾರ 600 ಕೋಟಿ ರೂಪಾಯಿ ಸಬ್ಸಿಡಿ ನೀಡಿ ರಫ್ತು ಮಾಡಲು ಅನುಕೂಲ ಮಾಡಿಕೊಟ್ಟಿತ್ತು. ಇದರ ಬದಲು ಸರ್ಕಾರ ಒಂದು ನೋಡೆಲ್ ಏಜೆನ್ಸಿ ಮೂಲಕ ಅದನ್ನು ದೇಶದಲ್ಲೇ ಉಳಿಸಿದ್ದರೆ ಇಂದು, ಎಸ್‌ಎಂಪಿ ಬೆಲೆಯೂ ಕಡಿಮೆ ಇರುತ್ತಿತ್ತು, ಶೋಚನೀಯ ಸ್ಥಿತಿಯೂ ನಿಮಾರ್ಣವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ತಕ್ಷಣ ಕನಿಷ್ಠ 65 ಸಾವಿರ ಮೆಟ್ರಿಕ್ ಟನ್ ಎಸ್‌ಎಂಪಿ ಆಮದು ಮಾಡಲು ಅವಕಾಶ ನೀಡುವ ಮೂಲಕ ಸದ್ಯದ ಕೊರತೆ ನಿವಾರಿಸಿ, ಬೆಲೆ ಸ್ಥಿರಗೊಳಿಸಬೇಕು ಎಂದು ಐಐಸಿಎಂಎ ಆಗ್ರಹಿಸಿದೆ.

    ಐಸ್‌ಕ್ರೀಂ ಆಮದು ಹೆಚ್ಚಳ!: ದೇಶದ ಐಸ್‌ಕ್ರೀಂ ತಯಾರಕರು ಸಮಸ್ಯೆ ಅನುಭವಿಸುತ್ತಿದ್ದಂತೆಯೇ, ಬೃಹತ್ ಎಫ್‌ಎಂಸಿಜಿ ಸಂಸ್ಥೆಗಳು ವಿದೇಶಗಳಿಂದ ಐಸ್‌ಕ್ರೀಂ ಆಮದು ಮಾಡುತ್ತಿವೆ. ಐಸ್‌ಕ್ರೀಂಗೆ ಶೇ.35ರಷ್ಟು ಆಮದು ತೆರಿಗೆಯಿದ್ದು, ಥಾಯ್ಲೆಂಡ್‌ನಿಂದ ಅಮದು ಮಾಡುವುದಾದರೆ ತೆರಿಗೆಯೇ ಕಟ್ಟಬೇಕಾಗಿಲ್ಲ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 1,113 ಟನ್ ಐಸ್‌ಕ್ರೀಂ ಆಮದು ಮಾಡಲಾಗಿದ್ದು, ಇದರಲ್ಲಿ ಶೇ.70ರಷ್ಟು ಥಾಯ್ಲೆಂಡ್‌ನಿಂದ ಆಮದಾಗಿದೆ. ಪ್ರಸ್ತುತ ಥಾಯ್ಲೆಂಡ್ ಆಮದು ಪ್ರಮಾಣ 4 ಪಟ್ಟು ಹೆಚ್ಚಾಗಿದ್ದು, ಬೇಸಿಗೆಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಐಐಸಿಎಂಎ ಅಧ್ಯಕ್ಷ ರಾಜೇಶ್ ಆರ್.ಗಾಂಧಿ.

    ಎಸ್‌ಎಂಪಿ ದರ ಹೆಚ್ಚಳ ಮತ್ತು ಅಲಭ್ಯತೆ ಕಲಬೆರಕೆಗೂ ದಾರಿಯಾಗಿ, ಉತ್ಪನ್ನಗಳ ಮೌಲ್ಯ ಕುಸಿಯುತ್ತದೆ. ಸಣ್ಣ ಉದ್ದಿಮೆಗಳ ಮೇಲೆ ಇದರ ನೇರ ಹೊಡೆತ ಬೀಳುತ್ತದೆ. ಇದರಿಂದ ಒಟ್ಟು ವ್ಯವಸ್ಥೆಯೇ ಕೆಟ್ಟು ಹೋಗುತ್ತದೆ. ಹಾಲು ಮತ್ತು ಅದರ ಉತ್ಪನ್ನಗಳ ಪೈಕಿ ಐಸ್‌ಕ್ರೀಂಗೆ ಅತೀ ಹೆಚ್ಚು ಶೇ.18 ಜಿಎಸ್‌ಟಿ ಇದೆ. ಇವೆಲ್ಲ ಉದ್ದಿಮೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

    ಪ್ರದೀಪ್ ಪೈ ಐಐಸಿಎಂಎ ಸದಸ್ಯ, ಹ್ಯಾಂಗ್ಯೋ ಐಸ್‌ಕ್ರೀಂ ಸಂಸ್ಥೆ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts