

ಕಾಂಚಿಪುರಂ: ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಪ್ರಯೋಜನವಿದೆ. ಇದರ ಕುರಿತು ನ್ಯಾಯಲಯದಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಒಂದಷ್ಟು ರಾಜಕೀಯ ಕಾರಣಗಳಿಗಾಗಿ ಅನುಮತಿ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ಭರವಸೆಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಕಾಂಚಿಪುರಂ ವರದಾರಾಜು ಪೆರುಮಾಳ್ ದೇಗುಲದಲ್ಲಿ ಗುರುವಾರ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಶಿವಕುಮಾರ್ (DK Shivakumar), 400 ಟಿಎಂಸಿಗೂ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಿದರೆ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಜೊತೆಗೆ, ಪೆನ್ನಾರ್ ನದಿ ನೀರಿನ ವಿಚಾರವಾಗಿ ನಿಮ್ಮ, ನಿಮ್ಮಲ್ಲಿಯೇ ಸಮಸ್ಯೆ ಇತ್ಯರ್ಥ ಪಡಿಸಿಕೊಂಡು ಬನ್ನಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಜಲಶಕ್ತಿ ಸಚಿವರು ಸಹ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ನಮ್ಮ ಸರ್ಕಾರ ನಕ್ಸಲ್ ಹೋರಾಟಗಾರರ ಜೊತೆ ಶಾಂತಿಯುತ ಮಾತುಕತೆ ನಡೆಸಿದ ಪರಿಣಾಮ 6 ಮಂದಿ ಬುಧವಾರದಂದು ಶರಣಾಗಿದ್ದಾರೆ. ಇದರಲ್ಲಿ ಒಬ್ಬ ಸದಸ್ಯರು ತಮಿಳುನಾಡು ಮೂಲದವರು. ಬಿ ಟೆಕ್ ಪದವಿ ಪಡೆದಿದ್ದಾರ ಎಂದು ನಕ್ಸಲರ ಶರಣಾಗತಿ ಕುರಿತು ಪ್ರತಿಕ್ರಿಯಿಸಿದ್ದಾರೆ.
ಒಂದು ದೇಶ ಒಂದು ಚುನಾವಣೆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಹುನ್ನಾರ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಇದು ಬಿಜೆಪಿಯ ರಾಜಕೀಯ ಕುತಂತ್ರ. ನಾವು ಈಗ ಇರುವ ಚುನಾವಣಾ ವ್ಯವಸ್ಥೆಯ ಪರವಾಗಿ ನಿಲ್ಲುತ್ತೇವೆ ಎಂದು ಯುಸಿಸಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ತಿರುಪತಿಯಲ್ಲಿ ಕಾಲ್ತುಳಿತವಾಗಿರುವ ಕುರಿತು ಪ್ರತಿಕ್ರಿಯಿಸಿ, ಆ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಇನ್ನೊಂದು ರಾಜ್ಯದ ವಿಚಾರಕ್ಕೆ ಅವರ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಲು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.