ಆ ಕ್ರಿಕೆಟಿಗನಿಗಾಗಿ ಕಾವ್ಯಾ, ಪ್ರೀತಿ ಜಿಂಟಾ ನಡುವೆ ಬಿಗ್​ಫೈಟ್..? ಯಾರು ಆ ಸೆನ್ಸೇಷನಲ್ ಆಟಗಾರ?

cricket
Published on

ನವದೆಹಲಿ: ಈ ಬಾರಿ ಐಪಿಎಲ್ 2025 ರ ಸೀಸನ್ ಪ್ರಾರಂಭವಾಗುವ ಮೊದಲು ಹರಾಜು ನಡೆಯಲಿದೆ. ಮತ್ತೊಮ್ಮೆ ಎಲ್ಲಾ ಆಟಗಾರರು ಖರೀದಿಗೆ ಬರುತ್ತಾರೆ. ಎಲ್ಲಾ ತಂಡಗಳು ಈ ಬಾರಿ ಸ್ಟಾರ್ ಆಟಗಾರರಿಗಾಗಿ ಭಾರಿ ಮೊತ್ತವನ್ನು ಖರ್ಚು ಮಾಡಲಿವೆ. ಹೊಸ ಆಟಗಾರರು ಕೂಡ ಹರಾಜಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

ಈ ಬಾರಿ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಹಾಗೂ ಪಂಜಾಬ್ ಕಿಂಗ್ಸ್ ಸಹ ಮಾಲೀಕರಾದ ಪ್ರೀತಿ ಜಿಂಟಾ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಕಂಡುಬರುತ್ತಿದೆ.

ಭಾರತೀಯ ಮೂಲದ ಆಟಗಾರ ಸೌರಭ್ ನೇತ್ರವಾಲ್ಕರ್ ಇತ್ತೀಚೆಗೆ ಅಮೆರಿಕದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಆಲ್ ರೌಂಡರ್ ಆಗಿ ಖ್ಯಾತಿ ಪಡೆದ ಈ ಆಟಗಾರ ತಮ್ಮ ತಂಡವನ್ನು ಸೂಪರ್-8ಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾವ್ಯಾ ಮಾರನ್, ಪ್ರೀತಿ ಜಿಂಟಾ ಮತ್ತು ಇತರ ಫ್ರಾಂಚೈಸಿಗಳು ಈ ಆಟಗಾರನನ್ನು ಕೊಂಡುಕೊಳ್ಳಲು ಪೈಪೋಟಿಗೆ ಬೀಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌರಭ್ ನೇತ್ರವಾಲ್ಕರ್ ಅವರು ಟೀಮ್ ಇಂಡಿಯಾ ಪರ 19 ವರ್ಷದೊಳಗಿನವರ ತಂಡದಲ್ಲಿ ಆಡಿದ್ದರು. ಆ ನಂತರ ವೃತ್ತಿಪರವಾಗಿ ಅಮೆರಿಕಕ್ಕೆ ಹೋಗಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ನಂತರ ಅಮೆರಿಕ ದೇಶಕ್ಕಾಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.

ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಿಂದ ಯುಎಸ್‌ಎ ಸೂಪರ್-8 ತಲುಪಲು ಸೌರಭ್ ನೇತ್ರವಾಲ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ 6.63 ಎಕಾನಮಿ ರೇಟ್‌ನೊಂದಿಗೆ 6 ವಿಕೆಟ್‌ ಪಡೆದಿದ್ದಾರೆ. ಹೀಗಾಗಿಯೇ ಐಪಿಎಲ್ ಹರಾಜಿನಲ್ಲಿ ಈ ಆಟಗಾರ ಬಂದರೆ ಹಣದ ಮಳೆಸುರಿಸಲು ತಂಡಗಳ ಮಾಲೀಕರು ತುದಿಗಾಲಮೇಲೆ ನಿಂತಿದ್ದಾರೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು. ಮೊದಲಿಗೆ ಕಾವ್ಯ ಮಾರನ್ ಮತ್ತು ಪ್ರೀತಿ ಜಿಂಟಾ ತಮ್ಮ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪೈಪೋಟಿಗೆ ಬೀಳಲಿದ್ದಾರೆ ಎಂಬ ಮಾತುಗಳು ಕ್ರೀಡಾ ಜಗತ್ತಿನಿಂದ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net