ಪರಿಣಾಮಕಾರಿಯಾಗಿ ಜಾರಿಯಾಗದ ಕಾಯ್ದೆ: ನೀರು ಬಳಕೆದಾರರ ಸಂಘದ ನಿರ್ದೇಶಕ ಮಂಗಲ ಎಂ.ಯೋಗೀಶ್ ಬೇಸರ

Meeting of Water Users' Cooperative Society
Published on

ಮಂಡ್ಯ: ರೈತರಿಗೆ ಅನುಕೂಲವಾಗಲೆಂದು ನೀರಾವರಿ ಕಾಯ್ದೆಗೆ ತಿದ್ದುಪಡಿ ತಂದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಲದ ನಿರ್ದೇಶಕ ಮಂಗಲ ಎಂ. ಯೋಗೀಶ್ ವಿಷಾದಿಸಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನೀರು ಬಳಕೆದಾರರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ನೀರಿನ ಕಂದಾಯವನ್ನು ನೀರು ಬಳಕೆದಾರರ ಸಹಕಾರ ಸಂಘಗಳು ಸಂಗ್ರಹ ಮಾಡಲು ಸರ್ಕಾರ ಆದೇಶಿಸಿದ್ದರೂ, ಅದು ಜಾರಿಯಾಗಿಲ್ಲದಿರುವುದು ನಿರ್ಲಕ್ಷೃತನವನ್ನು ತೋರಿಸುತ್ತದೆ ಎಂದು ಹೇಳಿದರು.

ಜನರು ಪ್ರಜಾಸತ್ತಾತ್ಮಕವಾಗಿ ಸಹಕಾರ ಸಂಘಗಳಲ್ಲಿ ಆಡಳಿತ ನಡೆಸುವಂತಾಗಲು ಕಾಯ್ದೆ, ನಿಯಮ ಹಾಗೂ ಪಾಲನೆಗಳ ಬಗ್ಗೆ ಅರಿವನ್ನು ಹೊಂದಬೇಕಾದದ್ದು ತೀರಾ ಅವಶ್ಯವಾಗಿದೆ. ನೀರು ಬಳಕೆದಾರರ ಸಹಕಾರ ಸಂಘ ಕೃಷಿ, ಸಹಕಾರ ಮತ್ತು ತಾಂತ್ರಿಕತೆಯನ್ನು ಒಳಗೊಂಡಿದೆ. ದೂರದೃಷ್ಠಿಯ ಕೊರತೆಯಿಂದಾಗಿ ಸಮರ್ಪಕ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳದೆ ರೈತ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸಲು ಹಿಂದುಳಿದಿದಾರೆೆ. ಈ ಕಾರಣದಿಂದಾಗಿ ಸಹಕಾರ ಸಂಘಗಳ ಬಲವರ್ಧನೆ ತೀರಾ ಅವಶ್ಯಕ ಎನಿಸಿದೆ ಎಂದರು.

ಕೇಂದ್ರ ಸರ್ಕಾರ ಜಲ ಆಯೋಗವನ್ನು ರಚನೆ ಮಾಡಿದೆ. ಅಣೆಕಟ್ಟೆ ಮಾತ್ರ ರಾಜ್ಯ ಸರ್ಕಾರದ್ದಾಗಿದ್ದು, ನೀರು ನಿರ್ವಹಣೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ಸಮಗ್ರವಾಗಿ ತಿದ್ದುಪಡಿಯಾಗಬೇಕಾಗಿದೆ. ಅವೈಜ್ಞಾನಿಕ ನೀರು ನಿರ್ವಹಣೆಯಿಂದಾಗಿ ವಿಶ್ವೇಶ್ವರಯ್ಯ ನಾಲೆ ಭಾಗದ ರೈತರು ಪ್ರಸ್ತುತ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಮುಂಗಾರು-ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದ ರೈತ ಈಗ ಮುಂಗಾರು ಬೆಳೆ ಹೇಗೆ ಎಂಬ ಬಗ್ಗೆ ಚಿಂತಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಪ್ರವೀಣ್ ಮಾತನಾಡಿ, ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ವ್ಯಾಪ್ತಿಯ ಹೊಲ ಮತ್ತು ವಿತರಣಾ ನಾಲೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಇಒ ಎಂ.ಬಿ.ಸುರೇಶ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಎಂ.ಕೆ.ಕೆಂಚೇಗೌಡ, ಎಂ.ಸಿ.ರವಿಕುಮಾರ್, ಎಂ.ಜೆ.ಗಿರೀಶ, ಚಂದ್ರಶೇಖರ್, ರೇಖಾ, ಮಾಜಿ ಪ್ರಧಾನ್ ಕೆ.ಶಂಕರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net