

ವಿಜಯವಾಣಿ ಸುದ್ದಿಜಾಲ ಕಡಬ
ಅಕ್ರಮ ಚಟುವಟಿಕೆಗಳನ್ನು ಮಾಡುವವರಿಗೆ ಸಾರ್ವಜನಿಕರು ಬೆಂಬಲ ನೀಡಬಾರದು. ಎಲ್ಲರೂ ಕಾನೂನು ಪಾಲಿಸಬೇಕು. ಜನರ ಸಮಸ್ಯೆ ಆಲಿಸುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಡಿ.ಎನ್.ಈರಯ್ಯ ಹೇಳಿದರು.
ಸವಣೂರು ಗ್ರಾಪಂ ವತಿಯಿಂದ ಆಯೋಜಿಸಲಾದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಪರವಾನಗಿ ರಹಿತ ಅಕ್ರಮ ಮರಳನ್ನು ಪಡೆದುಕೊಂಡವರ ಮೇಲೂ ಇಲಾಖೆ ಕೇಸು ದಾಖಲು ಮಾಡುತ್ತದೆ. ಅಕ್ರಮಗಳಿಗೆ ಯಾವತ್ತೂ ಪ್ರೋತ್ಸಾಹ ನೀಡಬೇಡಿ. ಪರವಾನಗಿ ಪಡೆದುಕೊಂಡವರಿಂದ ಮರಳು ಪಡೆದುಕೊಳ್ಳಿ ಎಂದರು.
ಶ್ರೀಧರ್ ಗೌಡ ಅಂಗಡಿಹಿತ್ಲು ಮಾತನಾಡಿ, ರಾತ್ರಿ ಹೊತ್ತು ಹಲವೆಡೆ ಅಂಗಡಿಗಳಲ್ಲಿ ಸುಖಾಸುಮ್ಮನೆ ಜನ ಸೇರಿಕೊಳ್ಳುವುದು ಕಂಡುಬರುತ್ತಿದೆ. ಪ್ರಖರ ತೀವ್ರತೆಯ ಲೈಟ್‌ಗಳನ್ನು ಹಾಕಿ ಕೆಲ ವಾಹನದವರು ಹೋಗುತ್ತಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಪಾಲ್ತಾಡಿಯ ಅಂಕತಡ್ಕದಲ್ಲೂ ಪೊಲೀಸ್ ಜನಸಂಪರ್ಕ ಸಭೆ ಮಾಡಿ ಎಂದರು.
ಗ್ರಾಪಂ ಸದಸ್ಯ ಸತೀಶ್ ಅಂಗಡಿಮೂಲೆ ಮಾತನಾಡಿ, ಸವಣೂರಿನ ವಿಷ್ಣುಪುರ, ಪಾಲ್ತಾಡಿಯ ಬಂಬಿಲ ಕ್ರಾಸ್ ಬಳಿ ಹಂಪ್ಸ್ ಅಳವಡಿಕೆ, ಸವಣೂರು ರೈಲ್ವೆ ಕ್ರಾಸಿಂಗ್ ಬಳಿ ಎರಡೂ ಕಡೆಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಕೆಗೆ ರೈಲ್ವೆ ಇಲಾಖೆಗೆ ಸೂಚನೆ ನೀಡಬೇಕು ಎಂದರು.
ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸವಣೂರು ಬೀಟ್ ಪೊಲೀಸ್ ಶ್ರೀಧರ್, ಗ್ರಾಪಂ ಸದಸ್ಯರಾದ ಅಬ್ದುಲ್ ರಜಾಕ್, ಗಿರಿಶಂಕರ ಸುಲಾಯ, ಚೆನ್ನು ಮುಂಡೋತಡ್ಕ, ರಾಜೀವಿ ವಿ.ಶೆಟ್ಟಿ, ಭರತ್ ರೈ ಪಾಲ್ತಾಡಿ, ಚಂದ್ರಾವತಿ ಸುಣ್ಣಾಜೆ, ಯಶೋದಾ ನೂಜಾಜೆ, ಚೇತನಾ ಶಿವಾನಂದ ಪಾಲ್ತಾಡಿ ಮತ್ತು ಗ್ರಾಪಂ ಸಿಬ್ಬಂದಿ ಪ್ರಮೋದ್‌ಕುಮಾರ್, ದಯಾನಂದ ಮಾಲೆತ್ತಾರು, ಜಯಾ ಕೆ., ಜಯಶ್ರೀ, ಶಾರದಾ, ಯತೀಶ್, ದೀಪಿಕಾ ಮೊದಲಾದವರಿದ್ದರು. ಪಿಡಿಒ ವಸಂತ ಶೆಟ್ಟಿ ಸ್ವಾಗತಿಸಿದರು.
ಸವಣೂರಿನಲ್ಲಿ ಗಾಂಜಾ ಸಕ್ರಿಯ
ಸವಣೂರಿನಲ್ಲಿ ಗಾಂಜಾ ಸೇವನೆಯ ಘಟನೆಗಳು ನಡೆಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಆಗ್ರಹಿಸಿದರು. ಎಸೈ ಈರಯ್ಯ ಉತ್ತರಿಸಿ, ಗಾಂಜಾ ಸೇವನೆ ಹಾಗೂ ಮಾರಾಟ ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ತನ್ನಿ. ಅಲ್ಲದೇ ಈ ಕುರಿತು ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸುತ್ತಿದೆ ಎಂದರು.
ಸಾಮಾನ್ಯ ವ್ಯಕ್ತಿಗೂ ಕೂಡ ನ್ಯಾಯ
ಅಪ್ರಾಪ್ತರ ಕೈಯಲ್ಲಿ ವಾಹನ ಚಲಾಯಿಸಲು ಕೊಡಬೇಡಿ. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಮಾಡಿದವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ಕಾನೂನು ಪಾಲನೆ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಜತೆಗೆ ಪ್ರವಾಹ ಸಂದರ್ಭದಲ್ಲೂ ಕೆಲಸ ಮಾಡಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಇಲಾಖೆಯ ಜತೆಗೆ ಸಾರ್ವಜನಿಕರೂ ಸಹಕರಿಸಬೇಕು. ಸಾಮಾನ್ಯ ವ್ಯಕ್ತಿಗೂ ಕೂಡ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಡಿ.ಎನ್.ಈರಯ್ಯ ತಿಳಿಸಿದರು.
ಉಲ್ಲಂಘಿಸಿದರೆ ಕ್ರಮ ಅನಿವಾರ್ಯ
ಸಾರ್ವಜನಿಕ ವಾಹನವನ್ನು ತಪಾಸಣೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ಜನ ಭಯಭೀತರಾಗುವುದು ಬೇಡ. ಕಾರು ಸಹಿತ ಇತರ ವಾಹನಗಳಲ್ಲಿ ಟಿಂಟ್ ಗ್ಲಾಸ್ ಹಾಕಿದ್ದರೆ ಕೂಡಲೇ ತೆರವು ಮಾಡಬೇಕು. ಕೆಲ ವಾಹನದವರು ಪ್ರಖರ ಬೆಳಕು ಸೂಸುವ ಲೈಟ್ ಅಳವಡಿಸಿ ಇತರ ವಾಹನದವರಿಗೆ ಸಮಸ್ಯೆಯಾಗುತ್ತಿದ್ದಾರೆ. ಈ ಬಗ್ಗೆಯೂ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಕಾನೂನು ಪಾಲನೆ ಎಲ್ಲರೂ ಮಾಡಬೇಕು. ಉಲ್ಲಂಸಿದರೆ ಕ್ರಮ ಅನಿವಾರ್ಯ ಎಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಡಿ.ಎನ್.ಈರಯ್ಯ ಎಚ್ಚರಿಸಿದರು.
ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಭದ್ರತೆ ದೃಷ್ಟಿಯಿಂದ ಇಲಾಖೆ ವಿಶೇಷ ಗಮನಹರಿಸುತ್ತಿದೆ. ಯಾವುದೇ ಸಮಸ್ಯೆ ಬಂದರೂ ನೇರವಾಗಿ ಇಲಾಖೆಯ ಗಮನಕ್ಕೆ ತನ್ನಿ. ಅಗತ್ಯ ಬಿದ್ದಲ್ಲಿ 112ಗೆ ಕರೆ ಮಾಡಿ. ಕೆಲವೇ ನಿಮಿಷಗಳಲ್ಲಿ ಇಲಾಖೆ ಬರಲಿದೆ. ಸೈಬರ್ ಕ್ರೈಂ, ಹ್ಯಾಕರ್‌ಗಳಿಂದ ಹಣ ವರ್ಗಾವಣೆ ಸೇರಿದಂತೆ ಸೈಬರ್ ಕ್ರೈಂ ಸಂಬಂಧಿಸಿದಂತೆ 1930ಗೆ ಕರೆಮಾಡಬಹುದು. ಡಿ.ಎನ್.ಈರಯ್ಯ, ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ