

ಬೆಂಗಳೂರು: ಧ್ಯಾನದಿಂದ ಮನುಷ್ಯನ ಮಿದುಳಿನ ಆರೋಗ್ಯ ಸುಧಾರಣೆ ಹಾಗೂ ಮಿದುಳಿನ ಆಯಸ್ಸು ವೃದ್ಧಿಯಾಗಿರುವುದ ಸಂಶೋಧನೆಯಿಂದ ಸಾಭೀತಾಗಿದೆ ಎಂದು ಈಶಾ ಫೌಂಡೇಶನ್ ಹೇಳಿಕೊಂಡಿದೆ. ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ನಡೆಸುವ 8 ದಿನಗಳ ಸಂಯಮ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಅವರ ವಯಸ್ಸಿಗೂ ಅವರ ಮಿದುಳಿನ ವಯಸ್ಸಿಗೂ ಸರಾಸರಿ 5.9 ವರ್ಷಗಳ ವ್ಯತ್ಯಾಸ ಕಂಡು ಬಂದಿದ್ದು, ಧ್ಯಾನ ಮಾಡುವವರ ಮಿದುಳಿನ ವಯಸ್ಸು ಹಿಮ್ಮುಖವಾಗಿದೆ ಎಂದು ಸಂಶೋಧಕ ಡಾ. ಸಾಕೇತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಯುನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾ ಮತ್ತು ಇಂಡಿಯಾ ಯುನಿವರ್ಸಿಟಿಯ 30ಕ್ಕೂ ಹೆಚ್ಚು ಸಂಶೋಧಕರು ಸುಮಾರು 10 ಸಾವಿರ ಜನರನ್ನು ಈ ಸಂಶೋಧನೆಗೆ ಒಳಪಡಿಸಿದ್ದರು. ಧ್ಯಾನ, ನಿದ್ರೆಯನ್ನು ಆಧರಿಸಿ ಇಇಜಿ ಸ್ಕ್ಯಾನ್ ಮೂಲಕ ಚಿಕ್ಕ ಡಿವೈಸ್‌ವೊಂದನ್ನು ಬಳಸಿ ಧ್ಯಾನದಲ್ಲಿ ತೊಡಗಿದವರನ್ನು ನಿಗಾದಲ್ಲಿರಿಸಲಾಗಿತ್ತು. ಅಂತಿಮವಾಗಿ ಧ್ಯಾನದಲ್ಲಿ ಪಾಲ್ಗೊಂಡವರ ಮಿದುಳಿನ ಕ್ರಿಯಾಶೀಲತೆ, ನೆನಪಿನ ಶಕ್ತಿ, ಗೊಂದಲಗಳ ನಿವಾರಣೆ ಹಾಗೂ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಿರುವುದು ಕಂಡು ಬಂದಿದೆ ಎಂದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನರರೋಗ ತಜ್ಞರೂ ಆಗಿರುವ ಸಂಶೋಧಕ ಡಾ.ಸಾಕೇತ್ ವಿವರಿಸಿದರು. ಈ ಹಿಂದೆ ಕೂಡಾ ಈ ನಿಟ್ಟಿನಲ್ಲಿ ಹಲವು ಸಂಶೋಧನೆಗಳು ನಡೆದಿದ್ದು, ಆ ಎಲ್ಲ ಅಧ್ಯಯನಗಳ ಆಧಾರದಲ್ಲಿ ಈ ಹೊಸ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು. ಲಿತಾಂಶದಲ್ಲಿ ಗಮನಾರ್ಹ ಸಾಮ್ಯತೆ ಕಂಡು ಬಂದಿದೆ. ಶಾಂಭವಿ ಮಹಾಮುದ್ರಾ ಕ್ರಿಯೆಯ ನಿಯಮಿತ ಅಭ್ಯಾಸವು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಮಿದುಳಿನಿಂದ ಉತ್ಪತ್ತಿಯಾಗುವ ಸಂತೋಷಕ್ಕ ಕಾರಣವಾಗುವ ನೈಸರ್ಗಿಕ ರಾಸಾಯನಿಕ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಐಟಿ-ಬಿಟಿ ಮತ್ತಿತರ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರ ಒತ್ತಡ ಶೇ50 ರಷ್ಟು ಕಡಿಮೆ ಆಗಿದೆ ಎಂದು ಡಾ.ಸಾಕೇತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈಶಾ ಫೌಂಡೇಶನ್ ರೂಪಿಸಿರುವ ‘ಮಿರಾಕಲ್ ಆಫ್ ಮೈಂಡ್ ಸದ್ಗುರು’ ಉಚಿತ ಆ್ಯಪ್ ಬಿಡುಗಡೆಗೊಳಿಸಲಾಯಿತು. ಚಿಕ್ಕಬಳ್ಳಾಪುರದ ಆದಿಯೋಗಿ ಕೇಂದ್ರದ ಸ್ವಾಮಿ ಪ್ರಭೋದ, ಈಶಾ ಫೌಂಡೇಶನ್ ಕಾರ್ಯಕರ್ತೆ ಲತಾ ಉಪಸ್ಥಿತರಿದ್ದರು.
ಧ್ಯಾನ ಭಾರತದ ಸನಾತನ ಆಧ್ಯಾತ್ಮಿಕ ಸಾಧನಾ ಮಾರ್ಗ. ಇದರಿಂದ ವೈಜ್ಞಾನಿಕವಾಗಿ ಇರುವ ಲಾಭಗಳ ಕುರಿತು ಈಶಾ ಫೌಂಡೇಶನ್ ತನ್ನ ಶಿಬಿರಾರ್ಥಿಗಳನ್ನು ಸಂಶೋಧನೆಗೊಳಪಡಿಸಿ ಹಲವು ಉಪಯುಕ್ತತೆಗಳನ್ನು ಗುರುತಿಸಿದೆ. ಈಶಾ ಫೌಂಡೇಶನ್ ನಡೆಸುವ ಸಂಯಮ, ಶಾಂಭವಿ, ಶೂನ್ಯ ಇತ್ಯಾದಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಹಲವು ಉಪಯೋಗಗಳನ್ನು ಕಂಡಿದ್ದಾರೆ ಎಂದು ಚಿಕ್ಕಬಳ್ಳಾಪುರದ ಆದಿಯೋಗಿ ಆಶ್ರಮದ ಸ್ವಾಮಿ ಪ್ರಭೋದ ತಿಳಿಸಿದ್ದಾರೆ. ಉತ್ತಮ ನಿದ್ರೆ, ಒತ್ತಡ ಕಡಿಮೆಯಾಗುವುದು, ಮಾನಸಿಕ ಸ್ಥೈರ್ಯ ಹೆಚ್ಚುವುದು, ಮೆಂಟಲ್ ಆರೋಗ್ಯ ವೃದ್ಧಿ, ನೆನಪಿನ ಶಕ್ತಿ ವೃದ್ಧಿ, ಗಮನ ಕೇಂದ್ರಿಕರಿಸುವ ಶಕ್ತಿ ವೃದ್ಧಿ, ಉತ್ಪಾದನ ಸಾಮರ್ಥ್ಯ ಹೆಚ್ಚಿಸಲು ಧ್ಯಾನ ಉಪಯುಕ್ತವಾಗಿದೆ. ಖಿನ್ನತೆ, ನಕಾರಾತ್ಮಕ ಚಿಂತನೆಗಳನ್ನು ನಿವಾರಿಸಿ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಧ್ಯಾನ ಪೂರಕವಾಗಿದೆ. ಧ್ಯಾನವು ಮೆದುಳಿನ ವಯಸ್ಸನ್ನು ನಿಯಂತ್ರಿಸುವುದರ ಜೊತೆಗೆ ಅಲ್ಜೈಮರ್ಸ್, ಡಿಮೆನ್ಷಿಯಾದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.