ಕಾಸರಗೋಡು: ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಚೇರಿ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಪತ್ರಕರ್ತರಿಗಾಗಿ ಪೋಕ್ಸೋ ಮಾಹಿತಿ ಕಾರ್ಯಾಗಾರ ವಾರ್ತಾ ಮತ್ತು ಮಾಹಿತಿ ಕಚೇರಿಯಲ್ಲಿ ಗುರುವಾರ ಜರುಗಿತು.
ಎಡಿಎಂ ಪಿ.ಅಖಿಲ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಘನತೆ ಕಾಪಾಡಲು ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟಲು 2012ರಲ್ಲಿ ರೂಪುಗೊಂಡಿರುವ ಪೋಕ್ಸೋ ಪರಿಣಾಮಕಾರಿ ಜಾರಿಯಲ್ಲಿ ಮಾಧ್ಯಮಗಳ ಪಾತ್ರ ಮಹತ್ತರ ಎಂದರು.
ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಎಲ್.ಶೀಬಾ ಅಧ್ಯಕ್ಷತೆ ವಹಿಸಿದ್ದರು. ವಕೀಲ ವಿನಯ್ ಮಂಗಾಟ್ ಪೋಕ್ಸೋ ಸಂಬಂಧಿತ ಭಾಗಗಳು ಮತ್ತು ಸಮಾಜದಲ್ಲಿ ಕಾಯ್ದೆಯ ಮಹತ್ವವನ್ನು ವಿವರಿಸಿದರು. ಪೋಕ್ಸೋ ಸಂತ್ರಸ್ತ ಮಕ್ಕಳಿಗೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡುವಾಗ ಗಮನಿಸಬೇಕಾದ ವಿಷಯಗಳ ಕುರಿತು ಚರ್ಚಿಸಲಾಯಿತು. ವಿವಿಧ ಮಾಧ್ಯಮ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
ಕಾಸರಗೋಡು ಪ್ರೆಸ್‌ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲೆಕ್ಕ ಪರಿಶೋಧಕಿ ಅಮಲಾ ಮ್ಯಾಥ್ಯೂ ವಂದಿಸಿದರು.