ಪಡುಬಿದ್ರಿ: ಜೀವನದಲ್ಲಿ ಎಷ್ಟೇ ಧನ ಕನಕ, ಆಸ್ತಿ ಪಾಸ್ತಿ ಸಂಪಾದಿಸಿದರೂ ಜನರ ನೆನಪಿನಲ್ಲಿ ಉಳಿಯುವುದು ನಾವು ಮಾಡಿದ ಒಳ್ಳೆಯ ಕೆಲಸ ಮಾತ್ರ. ಹಾಗಾಗಿ ಜೀವಿತಾವಧಿಯಲ್ಲಿ ಕಿಂಚಿತ್ತಾದರೂ ಸಮಾಜ ಸೇವೆ ಮಾಡೋಣ ಎಂದು ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್.ಶೆಟ್ಟಿ ಹೇಳಿದರು.
ಸಮಾಜರತ್ನ ದಿ.ಲೀಲಾಧರ ಶೆಟ್ಟಿ ಮತ್ತು ವಸುಂದರಾ ಶೆಟ್ಟಿ ದಂಪತಿ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸಮಾಜಸೇವಕ ಸೂರಿ ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳು ಮತ್ತು ಲೀಲಾಧರ ಶೆಟ್ಟಿ ಕುಟುಂಬಿಕರ ಸಹಕಾರದೊಂದಿಗೆ ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಳುಗು ತಜ್ಞ ಅಶೋಕ್ ಶೆಟ್ಟಿ ದೆಂದೂರು ಕಟ್ಟೆ ದಂಪತಿ ಹಾಗೂ ಕಾಪು ಪುರಸಭೆಯ 38 ಮಂದಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ದಿ.ಲೀಲಾಧರ ಶೆಟ್ಟಿ ದಂಪತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಪ್ರತಿಭಾ ಆರ್., ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉದ್ಯಮಿಗಳಾದ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಭಾಕರ ಪೂಜಾರಿ ಕಾಪು, ಶ್ರೀಧರ್ ಶೆಟ್ಟಿ ಮುಲುಂಡು, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಮುಖ್ಯಸ್ಥೆ ಡಾ.ವೀಣಾ ಕುಮಾರಿ, ಧಾರ್ಮಿಕ ಚಿಂತಕ ಕುತ್ಯಾರು ಪ್ರಸಾದ್ ಶೆಟ್ಟಿ, ಕಾಪು ಬಂಟರ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಜಯಲಕ್ಷ್ಮೆ ಸುರೇಶ್ ಶೆಟ್ಟಿ, ಮೋಹನ್‌ದಾಸ್ ಶೆಟ್ಟಿ ಕರಂದಾಡಿ, ರಮೇಶ್ ಶೆಟ್ಟಿ ಜಾರ್ಕಳ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕ ಸೂರಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾತ್ ಶೆಟ್ಟಿ ಮೂಳೂರು ಸ್ವಾಗತಿಸಿದರು. ದಿವಾಕರ್ ಶೆಟ್ಟಿ ಮಲ್ಲಾರು, ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.