

ನವದೆಹಲಿ: ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ವ್ಯವಸ್ಥೆಯ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮುಷ್ಕರದ ಮಧ್ಯೆ ಜನರು ಮನೆಯೊಳಗೆ ಇರುವಂತೆ ಒತ್ತಾಯಿಸಿ ಢಾಕಾದಲ್ಲಿರುವ ಭಾರತದ ರಾಯಭಾರಿ ಕಚೇರಿ ನೀಡಿದ ಸಲಹೆಯನ್ನು ಅನುಸರಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ (ಜುಲೈ 19) ಬಾಂಗ್ಲಾದೇಶದಲ್ಲಿರುವ ಭಾರತೀಯರಿಗೆ ವಿನಂತಿಸಿದೆ.
ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳಲ್ಲಿ ಹೈಕಮಿಷನ್ ಮತ್ತು ಸಹಾಯಕ ಹೈಕಮಿಷನ್‌ಗಳು ಲಭ್ಯವಿವೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸಮುದಾಯದ ಸದಸ್ಯರು ಮತ್ತು ಬಾಂಗ್ಲಾದೇಶದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಹೊರಬರದಂತೆ ಮತ್ತು ತಮ್ಮ ನಿವಾಸದ ಆವರಣದ ಹೊರಗೆ ಓಡಾಡದಂತೆ ಹೈಕಮಿಷನ್ ಸೂಚಿಸಿತ್ತು.
ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಬಸ್ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಬಸ್, ರೈಲು ಮತ್ತು ಮೆಟ್ರೋ ಸಂಚಾರವನ್ನು ನಿಲ್ಲಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನೆ ಪಥಸಂಚಲನ ನಡೆಸುತ್ತಿದೆ. ಇದುವರೆಗೂ ಪ್ರತಿಭಟನೆಯಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ ಮತ್ತು 2500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾಗಿಯಾಗಿರುವ ಕುಟುಂಬದ ಸದಸ್ಯರಿಗೆ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ಕೊನೆಗೊಳಿಸಲು ಬೇಡಿಕೆಯಿದೆ. ಆದರೆ ಪ್ರಧಾನಿ ಶೇಖ್ ಹಸೀನಾ ಅವರು ಮೀಸಲಾತಿಯನ್ನು ಕೊನೆಗೊಳಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿ ಪ್ರತಿಭಟನೆ ನಡೆಯುತ್ತಿದೆ.(ಏಜೆನ್ಸೀಸ್)