

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವನೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಹೀನಾಯ ಸೋಲುಂಡಿದೆ. ಆ ಮೂಲಕ 15 ವರ್ಷದ ಬಿಜೆಪಿ ಆಡಳಿತ ಅಂತ್ಯಗೊಂಡಿದ್ದು, ಅಧಿಕಾರದ ಚುಕ್ಕಾಣಿ ಎಎಪಿ ಪಾಲಾಗಿದೆ.
ದೆಹಲಿ ಮಹಾ ನಗರ ಪಾಲಿಕೆಯ 250 ವಾರ್ಡ್ಗಳಿಗೆ ಡಿಸೆಂಬರ್ 4ರಂದು ಮತದಾನ ನಡೆದಿತ್ತು. ಬಿಜೆಪಿ ಮತ್ತು ಆಮ್ ಆದ್ಮಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಇಂದು(ಡಿ.7) ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಬೆಳಗ್ಗೆಯಿಂದ ಬಿಜೆಪಿ ಮತ್ತು ಎಎಪಿ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿತ್ತು. ಅನೇಕ ಬಾರಿ ಬಿಜೆಪಿ, ಎಎಪಿಯನ್ನು ಹಿಂದಿಕ್ಕಿತ್ತಾದರೂ ಅಂತಿಮವಾಗಿ ಎಎಪಿ ಒಟ್ಟು 134 ವಾರ್ಡ್ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಲಿಕೆ ಗಾದಿಯನ್ನ ತನ್ನದಾಗಿಸಿಕೊಂಡಿದೆ. ಬಿಜೆಪಿ 104 ಸ್ಥಾನ ಮಾತ್ರ ಪಡೆಯುವಲ್ಲಿ ಸಫಲವಾಯಿತು.
ಇನ್ನು ಕಾಂಗ್ರೆಸ್ ಕೇವಲ 9 ವಾರ್ಡ್ಗಳಲ್ಲಿ ಗೆದ್ದಿದ್ದು, ಸ್ವತಂತ್ರ ಅಭ್ಯರ್ಥಿಗಳು 3 ವಾರ್ಡ್ಗಳಲ್ಲಿ ಜಯ ಸಾಧಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಶೇ.50.48 ಮತದಾನವಾಗಿತ್ತು. ಒಟ್ಟು 1,340 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಸ್ಪಷ್ಟ ಬಹುಮತ ಬರುತ್ತಿದ್ದಂತೆ ದೇಹಲಿ ಮಾತ್ರವಲ್ಲ, ದೇಶಾದ್ಯಂತ ಆಪ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.