

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ /ಉಪಮೇಯರ್ ಸ್ಥಾನಕ್ಕೆ ಕೊನೆಗೂ ಮೀಸಲು ಘೋಷಣೆಯಾಗಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸೋಮವಾರ ಮೀಸಲು ಪ್ರಕಟಿಸಿದ್ದು, ಮುಂದಿನ
ಮೇಯರ್ ಹುದ್ದೆ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಉಪ ಮೇಯರ್ ಹುದ್ದೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲು ನಿಗದಿಯಾಗಿದೆ.
60 ಮಂದಿ ಸದಸ್ಯ ಬಲದ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ 44 ಸದಸ್ಯರನ್ನು ಹೊಂದಿದ್ದು ಸ್ಪಷ್ಟ ಬಹುಮತ ಪಡೆದಿದೆ. ಈ ಪೈಕಿ ಜೆಪ್ಪು ವಾರ್ಡ್‌ನ ಭರತ್ ಕುಮಾರ್.ಎಸ್., ದೇರೆಬೈಲ್ ವಾರ್ಡ್‌ನ ಮನೋಜ್‌ಕುಮಾರ್ ಮತ್ತು ಪಣಂಬೂರು ಬೆಂಗ್ರೆ ವಾರ್ಡ್‌ನ ಸುನೀತಾ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಸುನೀತಾ ಅವರು ಹಾಲಿ ಉಪ ಮೇಯರ್ ಆಗಿದ್ದು ಮತ್ತೆ ಮೇಯರ್ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ. ಭರತ್ ಮತ್ತು ಮನೋಜ್ ಅವರ ಪೈಕಿ ಓರ್ವರನ್ನು ಬಿಜೆಪಿ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಿದೆ. ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಯ ಕಾರ್ಪೋರೇಟರ್ ಇಲ್ಲದ ಕಾರಣ ಈ ಬಾರಿ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಿಚ್ಚಳವಾಗಿದೆ.
ಹಿಂದುಳಿದ ವರ್ಗ ಎ ಮಹಿಳೆ ಮೀಸಲು ನಿಗದಿಯಾಗಿರುವ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಆಡಳಿತ ಪಕ್ಷ ಬಿಜೆಪಿಯಲ್ಲಿ 12ಕ್ಕೂ ಅಧಿಕ ಮಹಿಳೆಯರು ಅರ್ಹರಾಗಿದ್ದಾರೆ. ಹಾಗಾಗಿ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಬಂದರ್ ವಾರ್ಡ್‌ನ ಕಾರ್ಪೋರೇಟರ್ ಜೀನತ್ ಸಂಶುದ್ದೀನ್ ಅವರು ಮಾತ್ರ ಅರ್ಹತೆ ಪಡೆದಿದ್ದಾರೆ.
*6 ತಿಂಗಳ ಅವಧಿ ಹಾಲಿ ಮೇಯರ್ ಅವಧಿ ಸೆ.8ರಂದು ಅಂತ್ಯಗೊಳ್ಳಲಿದ್ದು, ಶೀಘ್ರ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ.ಈ ಹಿಂದಿನ ಮೇಯರ್ ಚುನಾವಣೆ (2023ರ ಸೆ.9)ನಿಗದಿತ ಅವಧಿಗಿಂತ 6 ತಿಂಗಳು ತಡವಾಗಿ ನಡೆದಿತ್ತು. ಹಾಗಾಗಿ ಮುಂದಿನ
ಮೇಯರ್ ಅವಧಿ ಕೇವಲ 6 ತಿಂಗಳಿಗೆ ಸೀಮಿತವಾಗಲಿದ್ದು, 2025ರ ಫೆ.28ಕ್ಕೆ ಅಂತ್ಯವಾಗಲಿದೆ.