

ಮಂಗಳೂರು : ಎಂ.ಸಿ.ಸಿ. (ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ )ಬ್ಯಾಂಕಿನ ವಾರ್ಷಿಕ ಮಹಾಸಭೆ ಸಂತ ಆಲೋಶಿಯಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಎಡ್ಮಂಡ್ ಫ್ರಾಂಕ್, ಬ್ಯಾಂಕಿನ ಸದಸ್ಯರಾದ ರೋನ್ಸ್ ಬಂಟ್ವಾಳ್, ಉದ್ಯಮಿ ರೋಹನ್ ಮೊಂತೇರೊ, ಪಿಯುಸ್ ಎಲ್. ರಾಡ್ರಿಗಸ್ ಮತ್ತು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಬ್ಯಾಂಕಿನ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.
ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ ‘ ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, 2023-24ನೇ ವಿತ್ತೀಯ ವರ್ಷದಲ್ಲಿ 10.45 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭವಾಗಿದ್ದು,
ಶೇ.10 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.
ಎಂ.ಸಿ.ಸಿ.ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇ.10 ಪ್ರಗತಿ ಸಾಧಿಸಿದ್ದು, 635.70 ಕೋಟಿ ರೂ.ಠೇವಣಿ ಇದೆ. ಮುಂಗಡದಲ್ಲಿಶೇ. 25.21 ಪ್ರಗತಿ ಸಾಧಿಸಿದ್ದು 444.88 ಕೋಟಿ ರೂ. ಮುಂಗಡ ನೀಡಲಾಗಿದೆ. ದುಡಿಯುವ ಬಂಡವಾಳ 752.95 ಕೋಟಿ ರೂ.ಮತ್ತು ಶೇರು ಬಂಡವಾಳ 31.21 ಕೋಟಿ ಆಗಿದೆ. ಬ್ಯಾಂಕಿನ ಎನ್‌ಪಿಎ ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ.1.37 ರಿಂದ ಶೇ. 1.12 ತಲುಪಿರುವುದು ಉತ್ತಮ ಬೆಳವಣಿಗೆಯಾಗಿದೆ. ಬ್ಯಾಂಕ್ 2023-24ನೇ ಆರ್ಥಿಕ ವರ್ಷದಲ್ಲಿ ಒಂದು ಸಾವಿರ ಕೋಟಿ ರೂ.ವ್ಯವಹಾರದ ಮೈಲುಗಲ್ಲನ್ನು ದಾಟಿರುತ್ತದೆ. ಬ್ಯಾಂಕ್ ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ಎ ಶ್ರೇಣಿಯ ಬ್ಯಾಂಕ್ ಎಂದು
ಗುರುತಿಸಲ್ಪಟ್ಟಿದೆ. ಬ್ರಹ್ಮಾವರದಲ್ಲಿ ಮಾರ್ಚ್ ತಿಂಗಳಲ್ಲಿ 17ನೇ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ಕಾರ್ಯ ವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಹಾಗೂ ಹೊಸ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಮುಂದಿನ ವರ್ಷದಲ್ಲಿ 10 ಹೊಸ ಶಾಖೆಗಳ ಆರಂಭ, ಉಡುಪಿ, ಮೂಡಬಿದ್ರಿ, ಕಾರ್ಕಳ, ಮತ್ತು ಕುಲಶೇಖರ ಶಾಖೆಗಳ ಸ್ಥಳಾಂತರ, ಡಿಜಿಟಲ್ ಸೇವೆಯಂತಹ ಗೂಗಲ್ ಪೇ, ಫೊನ್ ಪೇ, ಯುಪಿಎ, ಇತರ ಸೌಲಭ್ಯಗಳನ್ನು ಸದ್ಯದಲ್ಲಿಯೇ ಗ್ರಾಹಕರಿಗೆ ಒದಗಿಸುವ ಯೋಜನೆ ಕೈಗೊಳ್ಳಲಾಗಿದೆ. ಬ್ಯಾಂಕ್ ಮುಂದಿನ 10 ವರ್ಷಗಳ ನಿರ್ದಿಷ್ಟ ಗುರಿಯನ್ನು ತಲುಪಲು ಈಗಾಗಲೇ ಕಾರ್ಯಯೋಜನೆಯನ್ನು ರೂಪಿಸಿದ್ದೇವೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ , ನಿರ್ದೇಶಕರಾದ ಅಂಡ್ರೂೃ ಡಿಸೋಜ, ಡೇವಿಡ್ ಡಿಸೋಜ, ಜೋಸೆಫ್ ಎಂ. , ಅನಿಲ್ ಪತ್ರಾವೊ, ಡಾ.ಜೆರಾಲ್ಡ್ ಪಿಂಟೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೆರೊ, ಜೆ. ಪಿ.ರಾಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ದಾನಾ, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು. ಮಹಾ ಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.