ಕಾಸರಗೋಡಿನಲ್ಲಿ ಎಂಬಿಬಿಎಸ್ ಕಾಲೇಜು : ನಾಳೆಯಿಂದ ತರಗತಿ ಆರಂಭ : 50 ವಿದ್ಯಾರ್ಥಿಗಳಿಗೆ ಅವಕಾಶ

New Project (7)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಕಾಸರಗೋಡು ಜಿಲ್ಲೆಗೆ ಹೊಸದಾಗಿ ಮಂಜೂರುಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ದೊರೆತಿದ್ದು, ಎಂಬಿಬಿಎಸ್ ತರಗತಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಈ ವರ್ಷ 50 ಎಂಬಿಬಿಎಸ್ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲಿದ್ದು, ಸೆ.22ರಿಂದ ತರಗತಿ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಆಹಾರ ಸೌಲಭ್ಯ ಒದಗಿಸಲು ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಮಿನಿ ಕೆಫೆಟೇರಿಯಾ ಪ್ರಾರಂಭಿಸಲು ಕುಟುಂಬಶ್ರೀ ಮಿಷನ್ ಸಿದ್ಧತೆ ನಡೆಸಿದೆ. ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಪೂರ್ಣಗೊಂಡಿದ್ದು, ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಡಲು ಸರ್ಕಾರ ಸಿದ್ಧತೆ ನಡೆಸಿದೆ.

ಕ್ಯಾಂಪಸ್‌ನಲ್ಲಿ ಪೊಲೀಸ್ ಸಹಾಯಕ ಹುದ್ದೆ ಖಚಿತಪಡಿಸಿಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯಭರತ್ ರೆಡ್ಡಿ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಕಾಲೇಜಿಗೆ ಸಮೀಪದ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವ ಹಾಗೂ ಹೆಚ್ಚಿನ ಸೇವೆಗಳಿಗೆ ಅನುಮತಿ ನೀಡುವ ಜವಾಬ್ದಾರಿ ಬಗ್ಗೆ ಮೋಟಾರು ವಾಹನ ಇಲಾಖೆ ಮುಂದೆ ಬಂದಿದೆ. ಕಾಸರಗೋಡು ಹಾಗೂ ಕುಂಬಳೆಗೆ ಹೆಚ್ಚಿನ ಬಸ್ ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸೆ.24ರಂದು ಸಂಜೆ 4ಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಸ್ ಮಾಲೀಕರ, ಕ್ಯಾಬ್ ಸಂಘ ಪ್ರತಿನಿಧಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ವಿವಿಧ ಇಲಾಖೆಗಳ ಪ್ರಯೋಗಾಲಯ ಸೌಲಭ್ಯ ನವೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕೆಎಂಎಸ್‌ಸಿಎಲ್ ಪ್ರತಿನಿಧಿ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಕಾಲೇಜು ಆಸುಪಾಸು ಬೀದಿದೀಪ ಅಳವಡಿಸಲು ಜನಪ್ರತಿನಿಧಿಗಳ ಅನುದಾನ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಸ್ಥಳೀಯಾಡಳಿತ ಇಲಾಖೆ ನೇತೃತ್ವದಲ್ಲಿ, ಬದಿಯಡ್ಕ ಗ್ರಾಪಂನ ಇಬ್ಬರು ಹಸಿರು ಕ್ರಿಯಾ ಸೇನೆ ಸದಸ್ಯರನ್ನು ತ್ಯಾಜ್ಯ ವಿಲೇವಾರಿಗಾಗಿ ಶಾಶ್ವತ ಆಧಾರದ ಮೇಲೆ ವೈದ್ಯಕೀಯ ಕಾಲೇಜಿಗೆ ನಿಯೋಜಿಸಲಾಗುವುದು. ಕ್ಯಾಂಪಸ್‌ನಲ್ಲಿ ಮಿನಿ ಎಂಸಿಎಫ್, ತ್ಯಾಜ್ಯ ಸುರಿಯುವ ತೊಟ್ಟಿಗಳ ಅಳವಡಿಕೆ ಸೇರಿದಂತೆ ಮಾದರಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಜಾರಿಗೆ ಸ್ಥಳೀಯಾಡಳಿತ ಕೈಜೋಡಿಸಲಿದೆ. ಶುಚಿತ್ವ ಮಿಷನ್ ನಿರ್ದೇಶಕರು ಮತ್ತು ಜಿಲ್ಲಾ ಸಂಯೋಜಕರಿಗೆ ಸೂಚನೆ ನೀಡಲಾಗಿದೆ.

ಚೆರ್ಕಳದಿಂದ ಉಕಿನಡ್ಕವರೆಗಿನ ರಸ್ತೆ ಹದಗೆಟ್ಟಿದ್ದು, ರಸ್ತೆ ನವೀಕರಿಸಲು ಕೆಆರ್‌ಎಫ್‌ಬಿಗೆ ಸೂಚನೆ ನೀಡಲಾಗಿದೆ. ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ನಂತಹ ಸಂಸ್ಥೆಗಳು ವೈದ್ಯಕೀಯ ಕಾಲೇಜಿಗೆ ವಿವಿಧ ಸೌಲಭ್ಯ ಒದಗಿಸಿಕೊಡಲು ಮುಂದೆ ಬಂದಿವೆ. ವೈದ್ಯಕೀಯ ಕಾಲೇಜಿನಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೆಎಸ್‌ಇಬಿಗೆ ಸೂಚಿಸಲಾಗಿದೆ.

2013ರಲ್ಲಿ ನಡೆದಿತ್ತು ಶಿಲಾನ್ಯಾಸ

ಊಮನ್‌ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರದ ಕಾಲಾವಧಿಯಲ್ಲಿ 2013 ನ.30ರಂದು ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನಡೆದಿದ್ದು, 2016ರ ವೇಳೆಗೆ ಪೂರ್ಣಪ್ರಮಾಣದಲ್ಲಿ ಕಾಮಗಾರಿ ಆರಂಭಿಸಲಾಗಿದೆ. 2018 ನ.25ರಂದು ಹೊಸ ಬ್ಲಾಕ್‌ಗಳ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದ್ದರು. ಆಡಳಿತಾತ್ಮಕ ಕಟ್ಟಡ, ಸ್ಟೂಡೆಂಟ್ ಹಾಸ್ಟೆಲ್, ಅಧ್ಯಾಪಕರ ವಸತಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಆಸ್ಪತ್ರೆ ಕಟ್ಟಡ ಸಮುಚ್ಛಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿತ್ತು. ಗುತ್ತಿಗೆದಾರರಿಗೆ ಹಣ ಲಭಿಸದೆ ಕಾಮಗಾರಿ ಸ್ಥಗಿತಗೊಂಡಿತ್ತು. ಸುಮಾರು ಮೂರು ಕೋಟಿ ರೂ. ಬಾಕಿಯಿರಿಸಲಾಗಿತ್ತು. ಗುತ್ತಿಗೆದಾರ ನ್ಯಾಯಾಲಯ ಪ್ರವೇಶಿಸುತ್ತಿದ್ದಂತೆ ಸರ್ಕಾರ, 56ಕೋಟಿ ರೂ. ಬಿಡುಗಡೆ ಮಾಡಿದ್ದು, ಹೊಸ ಗುತ್ತಿಗೆದಾರರ ಮೂಲಕ ಉಳಿದ ಕಾಮಗಾರಿ ನಡೆಯಲಿದೆ.

ಉಕ್ಕಿನಡ್ಕದಲ್ಲಿ ಸರ್ಕಾರಿ ನರ್ಸಿಂಗ್ ತರಗತಿ

ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 60 ಸೀಟುಗಳೊಂದಿಗೆ ಸರ್ಕಾರಿ ನರ್ಸಿಂಗ್ ತರಗತಿ ಈಗಾಗಲೇ ಆರಂಭಗೊಂಡಿದೆ. ಮೊದಲ ವರ್ಷದ ಸಿಲೆಬಸ್ ಪ್ರಕಾರ ಥಿಯರಿ ತರಗತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಉಕ್ಕಿನಡ್ಕದಲ್ಲಿ ಕಟ್ಟಡ ಕಾಮಗಾರಿ ಪೂರ್ತಿಗೊಂಡ ತಕ್ಷಣ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಚಟುವಟಿಕೆ ನಡೆಸಲಿದೆ. ಕಾಸರಗೋಡು ಜತೆಗೆ ವಯನಾಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಎಂಬಿಬಿಎಸ್ ತರಗತಿ ಆರಂಭಿಸಲು ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಲಭಿಸಿದೆ.

ವೈದ್ಯಕೀಯ ಕಾಲೇಜಿನ ಕಾರ್ಯಾಚರಣೆ ಆರಂಭಕ್ಕೆ ನಡೆಸಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಗತಿ ಕೊಠಡಿಗಳು ಅಧ್ಯಯನಕ್ಕೆ ಈಗಾಗಲೇ ಸಿದ್ಧವಾಗಿವೆ. ಚೆರ್ಕಳದಲ್ಲಿ ಪುರುಷ ಮತ್ತು ಸ್ತ್ರೀಯರಿಗಾಗಿ ತಾತ್ಕಾಲಿಕ ಹಾಸ್ಟೆಲ್ ಸೌಲಭ್ಯ ಸಿದ್ಧಪಡಿಸಲಾಗಿದೆ. ಅಗತ್ಯ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕೆ.ಇನ್ಬಾಶೇಕರ್, ಜಿಲ್ಲಾಧಿಕಾರಿ https://www.vijayavani.net/signature-collection-campaign-by-congress https://www.vijayavani.net/mahalingeshwara-deva-devotee-committee-formation-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net