ಅನಧಿಕೃತ ಗೂಡಂಗಡಿಗಳ ತೆರವಿಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆದೇಶ

mng-28june-mayor
Published on



ಮಂಗಳೂರು : ತಡೆಗೋಟೆ ಕುಸಿತವಾಗಿದೆ, ರಸ್ತೆ ಹದಗೆಟ್ಟಿದೆ, ನೀರಿನ ಬಿಲ್ ಬಂದಿಲ್ಲ, ಬಸ್ ತಂಗುದಾಣವಿಲ್ಲ, ಅಕ್ರಮ ಅಂಗಡಿಗಳಿಂದ ತೊಂದರೆ..ಹೀಗೆ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ಶುಕ್ರವಾರ ನಡೆದ ಮೇಯರ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳನ್ನು ತೆರೆದಿಟ್ಟರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ನಾಗರಿಕರ ಅಹವಾಲುಗಳನ್ನು ಆಲಿಸಿ , ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ರಸ್ತೆ ಬದಿಅನಧಿಕೃತ ಗೂಡಂಗಡಿಗಳ ಬಗ್ಗೆ ಹಲವು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ
ಮೇಯರ್ ನಗರದ ಎಲ್ಲ ಫುಟ್‌ಪಾತ್‌ಗಳಲ್ಲಿ ಪಾದಾಚಾರಿಗಳಿಗೆ ನಡೆದಾಡಲು ಅನಾನುಕೂಲ ಆಗುವ ವ್ಯಾಪಾರವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡುವುದಾಗಿ ತಿಳಿಸಿದರು.
ನಗರದ ಹಲವೆಡೆ ಫಾಸ್ಟ್‌ಪುಡ್‌ಗಳಲ್ಲಿ ಬಳಸುವ ಖಾದ್ಯ ತೈಲ, ನೀರು ಸರಿ ಇಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳ ಮೂಲಕ ದಾಳಿ ನಡೆಸಿ ತೆರವಿಗೆ ಕ್ರಮ ವಹಿಸಲಾಗುವುದು. ಪ್ರತಿ ವಾರ್ಡ್‌ನಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ವಾರ್ಡ್‌ಗಳಲ್ಲಿ ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸಿ ಅಲ್ಲಿಗೆ ವ್ಯಾಪಾರ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು. ಸ್ಥಳಾಂತರ ಆಗದವರಿಗೆ ಕಾನೂನು ಕ್ರಮ ವಹಿಸುವುದಾಗಿ ಮೇಯರ್ ತಿಳಿಸಿದರು.
* ತಡೆಗೋಡೆ ಕುಸಿತ
ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ನೇತ್ರಾವತಿ ಜಲಾಭಿಮುಖ ಯೋಜನೆಯಡಿ ನಿರ್ಮಿಸಲಾಗಿರುವ ತಡೆಗೋಡೆ ಮೊದಲ ಮಳೆಗೆ ಕುಸಿತವಾಗಿದೆ. ಇದರಲ್ಲಿ ಸಿಆರ್‌ಝಡ್ ಕಾನೂನು ಉಲ್ಲಂಘನೆ ಜತೆಗೆ ಜನರ ತೆರಿಗೆಯ ಕೋಟ್ಯಂತರ ರೂ.ಪೋಲು ಮಾಡಲಾಗುತ್ತಿದೆ. ಈ ಯೋಜನೆಯನ್ನು ಕೈಬಿಡುವಂತೆ ಎಂದು ಜಯಪ್ರಕಾಶ್ ಎಂಬವರು ಕರೆ ಮಾಡಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ ‘ ನೇತ್ರಾವತಿ ಜಲಾಭಿಮುಖ ಯೋಜನೆಯಿಂದಾಗಿ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿದೆ. ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಬೋಳಾರದವರೆಗಿನ 2.1 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಡಿಪಿಆರ್ ಅನುಮೋದನೆ ದೊರೆತು ಕಾಮಗಾರಿ ನಡೆದಿದೆ. ಇತ್ತೀಚೆಗೆ ತಡೆಗೋಡೆ ಕುಸಿತವಾಗಿ ಕಳಪೆ ಕಾಮಗಾರಿ ಕುರಿತಂತೆ ಸ್ಮಾರ್ಟ್ ಸಿಟಿಯ ಬೋರ್ಡ್ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಎನ್‌ಜಿಟಿ ತಂಡ ಈಗಾಗಲೇ ಅಲ್ಲಿ ಭೇಟಿ ನೀಡಿ ಪರಿಸರಕ್ಕೆ ಧಕ್ಕೆ ತರುವ ವಿಚಾರ ಸಂಗ್ರಹಿಸುವಂತೆ ತಿಳಿಸಿದೆ. ಸದ್ಯ ಎನ್‌ಜಿಟಿ ಕಾಮಗಾರಿಗೆ ತಡೆ ನೀಡಿದೆ. ಕುಸಿತಗೊಂಡ ತಡೆಗೋಡೆಯನ್ನು ಗುತ್ತಿಗೆದಾರರು ಮರು ನಿರ್ಮಾಣ ಮಾಡಲಿದ್ದಾರೆ. ಅವರಿಗೆ ಹಣ ನೀಡದಂತೆ ಸೂಚಿಸಲಾಗಿದೆ ಎಂದರು.
ಕಳಪೆ ಕಾಮಗಾರಿಯನ್ನು ಪಾಲಿಕೆ ಅಧಿಕಾರಿಗಳು ಗಮನಿಸಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೇಯರ್ ಸ್ಮಾರ್ಟ್ ಸಿಟಿ ಲಿಮಿಟೆಡ್‌ನಿಂದ ನಡೆಯುತ್ತಿರುವ ಕಾಮಗಾರಿ ಪಾಲಿಕೆಯಿಂದ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಬೇಕು. ಆ ಕಾಮಗಾರಿಯ ಪರಿಶೀಲನೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಚೇರ್ಮನ್‌ರಿಂದ ಆಗಬೇಕು ಎಂದರು.
* ಬಯಲು ಶೌಚಾಲಯ
ಸುರತ್ಕಲ್‌ನ ಗೋವಿಂದದಾಸ್ ಕಾಲೇಜು ಹಿಂಬದಿಯ ರಸ್ತೆ ಹದಗೆಟ್ಟಿದೆ. ಒಂದೇ ಮಳೆಗೆ ರಸ್ತೆಯ ತೇಪೆ ಕಿತ್ತು ಹೋಗಿದೆ. ನಾನೂ ಬಿಜೆಪಿ ಕಾರ್ಯಕರ್ತ ಆಗಿರುವುದರಿಂದ ನಿಮ್ಮಲ್ಲಿ ಹೇಳುತ್ತಿದ್ದೇನೆ ಎಂದು ಸ್ಥಳಿಯರೋರ್ವರು ಗಮನ ಸೆಳೆದರು.
ಕುಲಶೇಖರ, ನಿಡ್ಡೇಲ್ ಬಳಿ ರಸ್ತೆಯ ಬದಿಯನ್ನೇ ಅಲ್ಲಿ ರೈಲ್ವೇ ಕಾಮಗಾರಿ ನಡೆಸುವ ಕಾರ್ಮಿಕರು ಬಯಲು
ಶೌಚಾಲಯವಾಗಿಸಿದ್ದಾರೆ. ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಕ್ರಮವಿಲ್ಲ ಎಂದು ಇಗ್ನೇಶಿಯಸ್ ಡಿಸೋಜಾ ಎಂಬವರು ದೂರಿದರು. ಕೆಪಿಟಿಯಿಂದ ಯೆಯ್ಯಡಿವರೆಗಿನ ರಸ್ತೆಯಲ್ಲಿ ಅಕ್ರಮ ಅಂಗಡಿಗಳಿಂದ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಂತಿ ಎಂಬವರು ಸಮಸ್ಯೆ ತೋಡಿಕೊಂಡರು.
* ನೀರಿನ ಬಿಲ್‌ಬಂದಿಲ್ಲ
ಕಳೆದ ನಾಲ್ಕು ತಿಂಗಳಿಂದ ನೀರಿನ ಬಿಲ್ ಬಂದಿಲ್ಲ. ನೀರು ಕೂಡಾ ಕೆಂಪು ಬಣ್ಣದಿಂದ ಕೂಡಿರುತ್ತದೆ ಎಂದು ಮೇರಿಹಿಲ್‌ನ ವಿನ್ಸೆಂಟ್ ಎಂಬವರು ಮೇಯರ್ ಗಮನಕ್ಕೆ ತಂದರು. ಕುಳಾಯಿಯ ಹೊನ್ನಕಟ್ಟೆಯಲ್ಲಿ ಬಸ್ಸು ನಿಲ್ದಾಣವಿಲ್ಲದೆ, ಪ್ರಯಾಣಿಕರು
ರಸ್ತೆಯಲ್ಲಿಯೇ ನಿಲ್ಲಬೇಕಾಗಿದೆ ಎಂದು ರಮೇಶ್ ಕುಳಾಯಿ ಎಂಬವರು ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net