ಗುರು ಹಿರಿಯರನ್ನು ಗೌರವಿಸುವ ಗುಣ ಬೆಳೆಯಲಿ

gan (5)
Published on

ಕುಂದಾಪುರ: ಇಂದಿನ ಪೀಳಿಗೆಯ ಮಕ್ಕಳಲ್ಲಿ ತಾಳ್ಮೆ ಕಡಿಮೆ. ಮೊಬೈಲ್ ಯುಗದಲ್ಲಿ ಮೊಬೈಲ್ ಬಿಟ್ಟು ಹೊರಬರುವ ತಾಳ್ಮೆ ಯಾರಲ್ಲೂ ಇಲ್ಲ. ಯಾವುದೇ ವಿಷಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ನಮಗೆ ಅದರ ಉತ್ತಮ ಅನುಭವ ದೊರೆಯುತ್ತದೆ. ಜೀವನದಲ್ಲಿ ನಾವು ಏನಾಗಬೇಕು ಎಂಬುದರ ನಿರ್ಧಾರ ಮಾಡಿಕೊಳ್ಳಬೇಕು. ಮಕ್ಕಳು ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಿಎಸ್ಸೆನ್ನೆಲ್ ನಿವೃತ್ತ ಸಬ್ ಡಿವಿಜನಲ್ ಇಂಜಿನಿಯರ್ ಭಾಸ್ಕರ ಭಟ್ ಹೇಳಿದರು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ 17ನೇ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ತ್ರಾಸಿಯ ಮಿಲೇನಿಯಂ ಹಾಲ್‌ನಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ತ್ರಾಸಿ ಕ್ರೈಸ್ಟ್‌ಕಿಂಗ್ ಚರ್ಚ್ ಧರ್ಮಗುರು ರೋಜಾರಿಯೋ ಫರ್ನಾಂಡಿಸ್ ಶಿಬಿರ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ದಯಾನಂದ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ, ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಕಾಲೇಜು ಕಾರ್ಯದರ್ಶಿ ಎನ್.ಸದಾಶಿವ ನಾಯಕ್, ಉದ್ಯಮಿ ಉಮೇಶ ಎಲ್.ಮೇಸ್ತ ಗುಜ್ಜಾಡಿ, ಉದ್ಯಮಿಗಳಾದ ನಾಗೇಶ ನಾಯಕ್, ಶಿವ ಆರ್.ಪೂಜಾರಿ, ಲಿಫ್ಟನ್ ಒಲಿವೇರಾ, ಮಾರ್ಕ್ ಡಿಅಲ್ಮೇಡಾ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ವೆಂಕಟೇಶಮೂರ್ತಿ ಎನ್.ಸಿ. ಸ್ವಾಗತಿಸಿದರು. ಯೋಜನಾಧಿಕಾರಿ ಸುಗುಣಾ ಆರ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ವಿದ್ಯಾರ್ಥಿನಿ ಗೌತಮಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net