

ಬೈಂದೂರು: ಜನರಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕೆಂಬ ದೃಷ್ಟಿಯಿಂದ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ತಮ್ಮ ಜನ್ಮದಿನಾಚರಣೆಯನ್ನು ಮಾದಕ ವಸ್ತುಗಳ ವ್ಯಸನ ಮುಕ್ತ ದಿನವಾಗಿ ಆಚರಿಸುವಂತೆ ಕೋರಿದ್ದರು. ಎಲ್ಲರೂ ಇದಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಎಲ್ಲರೂ ಮಾದಕ ವಸ್ತಗಳಿಂದ ದೂರವಿದ್ದು, ಅವರ ಸಂದೇಶವನ್ನು ಪಾಲಿಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣ ಸಂಯೋಜಕ ಸತ್ಯನಾ ಕೊಡೇರಿ ಹೇಳಿದರು.
ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ನಡೆದ ಮಹಾಂತ ಡಾ.ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನಾಚರಣೆ ಮತ್ತು ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಹಸೀಲ್ದಾರ್ ರಾಮಚಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಾಗರಾಜ ಶೆಟ್ಟಿ, ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರಾದ ವೆಂಕಟ್ರಮಣ, ಪದ್ಮನಾಭ ಪಿ., ಅಗ್ನಿಶಾಮಕ ದಳದ ಶೀನ ನಾಯ್ಕ, ಮೆಸ್ಕಾಂನ ಸಹಾಯಕ ಅಭಿಯಂತರ ಹರೀಶ್, ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಸುಧಾಕರ ಪಿ.ನಿರೂಪಿಸಿದರು. ಯುಬಿಎಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ.ಶೆಟ್ಟಿ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಸೇನೇಶ್ವರ ದೇವಸ್ಥಾನದಿಂದ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯವರೆಗೆ ಕಾಲ್ನಡಿಗೆಯ ಜಾಥಾ ನಡೆಯಿತು.