ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಯನ್ನು ಬೆಂಬಲಿಸುತ್ತೀರಾ? ರೋಹಿತ್​ ಶರ್ಮ ಕೊಟ್ಟ ಉತ್ತರ ವೈರಲ್​

Rohit Sharma 1
Published on

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಫೈನಲ್ ತಲುಪಿದೆ. ಗುರುವಾರ (ಜೂನ್​ 27) ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಇದೀಗ ರೋಹಿತ್ ಪಡೆ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸುವಲ್ಲಿ ರೋಹಿತ್ ಶರ್ಮ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್ ಮಾಡಲು ಕಷ್ಟಕರವಾಗಿದ್ದ ನಿಧಾನಗತಿಯ ಪಿಚ್​ನಲ್ಲಿ ರೋಹಿತ್, ಎದುರಾಳಿ ಬೌಲರ್​ಗಳನ್ನು ದಂಡಿಸಿದರು. ಮೇಲಾಗಿ ಆರಂಭಿಕ ಜೊತೆಗಾರ ವಿರಾಟ್ ಕೊಹ್ಲಿ ಕೇವಲ 9 ರನ್ ಗಳಿಸಿ ಔಟಾದರು ಕೂಡ, ಒನ್ ಡೌನ್​ನಲ್ಲಿ ಬಂದ ರಿಷಬ್​ ಪಂಥ್ ಫೇಲ್ ಆದ್ರೂ ಸಹ ರೋಹಿತ್ ತಮ್ಮ ಖದರ್​ ನಿಲ್ಲಿಸಲಿಲ್ಲ. ಅಬ್ಬರದ ಬ್ಯಾಟಿಂಗ್​ ಮುಂದುವರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, ಫೈನಲ್‌ನಲ್ಲಿ ನಮ್ಮನ್ನು ಗೆಲ್ಲಿಸುವ ಓರ್ವ ಆಟಗಾರನಿದ್ದಾನೆ ಎಂದು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಪ್ರಸಕ್ತ ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಯ್ಕೆಯಾಗಿದ್ದರು. ಆದರೆ, ಜೈಸ್ವಾಲ್​ ಸಂಪೂರ್ಣವಾಗಿ ಹೊರಗುಳಿದಿದ್ದು, ವಿರಾಟ್ ಕೊಹ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ. ಆದರೆ, ರನ್​ ಮೆಶಿನ್​ ಕೊಹ್ಲಿಯಿಂದ ರನ್ ಬರುತ್ತಿಲ್ಲ. ಈ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 37 ರನ್ ಗಳಿಸಿದ್ದ ಕೊಹ್ಲಿ ಉಳಿದೆಲ್ಲ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಎರಡು ಬಾರಿ ಡಕೌಟ್​ ಆಗಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಹೀನಾಯವಾಗಿ ವಿಫಲರಾಗಿದರು. ಕೇವಲ 9 ರನ್ ಗಳಿಸಿ ಪೆವಿಲಿಯನ್ ತಲುಪಿದರು. ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಯನ್ನು ಬೆಂಬಲಿಸುತ್ತೀರಾ ಎಂದು ನಿರೂಪಕರು ರೋಹಿತ್ ಶರ್ಮಾ ಅವರನ್ನು ಪ್ರಶ್ನಿಸಿದರು.

ಪ್ರಶ್ನೆಗೆ ಉತ್ತರಿಸಿದ ರೋಹಿತ್​, ಖಂಡಿತವಾಗಿಯೂ.. ವಿರಾಟ್ ಓರ್ವ ಕ್ಲಾಸ್ ಪ್ಲೇಯರ್, ಅವರೊಬ್ಬ ಬಿಗ್ ಮ್ಯಾಚ್ ಪ್ಲೇಯರ್. ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಈ ರೀತಿಯ ಹಂತವನ್ನು ಹೊಂದಿರುತ್ತಾನೆ. ಆದರೆ, ಕೊಹ್ಲಿ ವಿಷಯದಲ್ಲಿ ಫಾರ್ಮ್ ದೊಡ್ಡ ವಿಷಯವಲ್ಲ. ಅವರು ಫೈನಲ್‌ಗಾಗಿ (ರನ್) ಕಾಯುತ್ತಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದರು. ತಮ್ಮ ತಂಡದ ಪ್ರಮುಖ ಆಟಗಾರನಿಗೆ ನಾಯಕನಾಗಿ ರೋಹಿತ್ ನೀಡಿದ ಬೆಂಬಲವನ್ನು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸುತ್ತಾರೆ. ಆದರೆ, ಕೊಹ್ಲಿ ಒಮ್ಮೆ ರನ್ ಗಳಿಸಲು ಆರಂಭಿಸಿದರೆ ಹೇಗೆ ಆಡುತ್ತಾರೆ ಎನ್ನುವುದನ್ನು ಹೇಳಬೇಕಾಗಿಲ್ಲ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net