VIDEO: ವಿಶ್ವಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಜಯಿಸಿದ ಆಸ್ಟ್ರೇಲಿಯಾ

maxwel and carry
Published on

ಮ್ಯಾಂಚೆಸ್ಟರ್: ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ (108ರನ್, 90 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಅಲೆಕ್ಸ್ ಕ್ಯಾರಿ (106ರನ್, 114 ಎಸೆತ, 7 ಬೌಂಡರಿ, 2 ಸಿಕ್ಸರ್) ಜೋಡಿ 6ನೇ ವಿಕೆಟ್‌ಗೆ ಪೇರಿಸಿದ 212 ರನ್ ಜತೆಯಾಟದ ಫಲವಾಗಿ ಆಸ್ಟ್ರೇಲಿಯಾ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡ 3 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಇದರೊಂದಿಗೆ ಆರನ್ ಫಿಂಚ್ ಬಳಗ ಟಿ20 ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು. ಈ ಮೂಲಕ ಇಂಗ್ಲೆಂಡ್ ಕರೊನಾ ಕಾಲದಲ್ಲಿ ತವರಿನಲ್ಲಿ ಸತತ 5ನೇ ಸರಣಿ ಗೆಲುವಿನ ಅವಕಾಶ ತಪ್ಪಿಸಿಕೊಂಡಿತು.

ಓಲ್ಡ್ ಟ್ರಾಫೋರ್ಡ್​ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಏಕದಿನ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡ, ಜಾನಿ ಬೇರ್‌ಸ್ಟೋ (112) ಶತಕದಾಟದ ನೆರವಿನಿಂದ 7 ವಿಕೆಟ್‌ಗೆ 302 ರನ್ ಗಳಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತದ ನಡುವೆಯೂ ಮ್ಯಾಕ್ಸ್‌ವೆಲ್-ಕ್ಯಾರಿ ಜೋಡಿಯ ಭರ್ಜರಿ ನಿರ್ವಹಣೆ ಫಲವಾಗಿ 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 305 ರನ್‌ಗಳಿಸಿ ಜಯದ ನಗೆ ಬೀರಿತು.

ರೋಚಕತೆ ಹುಟ್ಟಿಸಿದ ಕಡೇ ಓವರ್..! : ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾ ತಂಡ ಜಯ ದಾಖಲಿಸಲು 10 ರನ್ ಅವಶ್ಯಕತೆ ಇತ್ತು. ಈ ವೇಳೆ ಮಿಚೆಲ್ ಸ್ಟಾರ್ಕ್, ಆದೀಲ್ ರಶೀದ್ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ಸುಲಭವಾಗಿಸಿದರು. 2ನೇ ಹಾಗೂ ಮೂರನೇ ಎಸೆತದಲ್ಲಿ ಸ್ಟಾರ್ಕ್ ಹಾಗೂ ಕಮ್ಮಿನ್ಸ್ ಸಿಂಗಲ್ಸ್ ತಂದರೆ, 4ನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಸ್ಟಾರ್ಕ್ ತಂಡಕ್ಕೆ ಇನ್ನು 2 ಎಸೆತಗಳು ಬಾಕಿ ಇರುವಾಗಲೇ ಜಯ ತಂದರು.

5 ವರ್ಷಗಳ ಬಳಿಕ ತವರಲ್ಲಿ ಸೋತ ಇಂಗ್ಲೆಂಡ್ : ಇದರೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡ ತವರಿನಲ್ಲಿ 2015ರ ಬಳಿಕ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಸೋಲು ಕಂಡಿತು. ಜತೆಗೆ ಮ್ಯಾಂಚೆಸ್ಟರ್‌ನಲ್ಲಿ ದಾಖಲಾದ ಅತಿ ಹೆಚ್ಚು ಚೇಸಿಂಗ್ ಮೊತ್ತ ಇದಾಗಿದೆ. ಇದಕ್ಕೂ ಮೊದಲು 1986ರಲ್ಲಿ 60 ಓವರ್‌ಗಳ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಇಂಗ್ಲೆಂಡ್ ತಂಡ 4 ವಿಕೆಟ್‌ಗೆ 286 ರನ್ ಗಳಿಸಿತ್ತು. ಜತೆಗೆ ಕರೊನಾ ಕಾಲದಲ್ಲಿ ತವರಿನಲ್ಲಿ ಸತತ 5 ಸರಣಿ (ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಐರ್ಲೆಂಡ್ ವಿರುದ್ಧ ಏಕದಿನ, ಪಾಕಿಸ್ತಾನ ವಿರುದ್ಧ ಟೆಸ್ಟ್, ಆಸ್ಟ್ರೇಲಿಯಾ ವಿರುದ್ಧ ಟಿ20) ಗೆಲುವಿನಿಂದ ವಂಚಿತವಾಯಿತು.

ಇಂಗ್ಲೆಂಡ್: 7 ವಿಕೆಟ್‌ಗೆ 302 (ಬೇರ್‌ಸ್ಟೋ 112, ಬಿಲ್ಲಿಂಗ್ಸ್ 57, ವೋಕ್ಸ್ 53*, ಮಿಚೆಲ್ ಸ್ಟಾರ್ಕ್ 74ಕ್ಕೆ 3, ಆಡಮ್ ಜಂಪಾ 51ಕ್ಕೆ 3, ಕಮ್ಮಿನ್ಸ್ 53ಕ್ಕೆ 1). ಆಸ್ಟ್ರೇಲಿಯಾ: 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 305 (ಆಲೆಕ್ಸ್ ಕ್ಯಾರಿ 106, ಗ್ಲೆನ್ ಮ್ಯಾಕ್ಸ್‌ವೆಲ್ 108, ಕ್ರಿಸ್ ವೋಕ್ಸ್ 46ಕ್ಕೆ 2, ಜೋ ರೂಟ್ 46ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net